ವಿದ್ಯಾರ್ಥಿ ಅಪಹರಿಸಿ ಬೆದರಿಸಿ ಸುಲಿಗೆ ಸಹಪಾಠಿಗಳು ಸೇರಿ 6 ಮಂದಿ ಸೆರೆ

ಬೆಂಗಳೂರು, ನ.೨೨-ನಗರದ ಕೆಎಲ್ ಇ ಕಾಲೇಜಿನ ಪದವಿ ವಿದ್ಯಾರ್ಥಿಯೊಬ್ಬನನ್ನು ಇಬ್ಬರು ಸಹಪಾಠಿಗಳು ಸೇರಿ ಸಂಚು ರೂಪಿಸಿ ಅಪಹರಿಸಿ ೧ಲಕ್ಷ ೨೦ ಸಾವಿರ ರೂಗಳನ್ನು ದೋಚಿ ಜೀವ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದ ಕೃತ್ಯವನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬೇಧಿಸಿ ೬ಮಂದಿಯನ್ನು ಬಂಧಿಸಿದ್ದಾರೆ.
ಕೆಎಲ್ ಇ ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಭುವನ್, ಪ್ರಜ್ವಲ್ ಮತ್ತವರ ಸ್ನೇಹಿತರಾದ ಅನಿಲ್ ,ದೀಪು,ನಿಶ್ಚಯ್ ,ಪ್ರಜ್ವಲ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಪಾಪರೆಡ್ಡಿಪಾಳ್ಯದ ಕೆಎಲ್ ಇ ಕಾಲೇಜಿನಲ್ಲಿ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ (೨೦)ಖಾಸಗಿ ಕಂಪನಿಯ ಕಚೇರಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದು ಆತನ ಬಳಿ ಹೆಚ್ಚಿನ ಹಣ ಇರುವುದನ್ನು ಸಹಪಾಠಿಗಳಾದ ಭುವನ್, ಪ್ರಜ್ವಲ್ ಗಮನಿಸಿ ಹಣದಾಸೆಗೆ ಆತನನ್ನು ಅಪಹರಿಸಲು ಸಂಚು ರೂಪಿಸಿದ್ದರು.
ಅದರಂತೆ ಬಂಧಿತ ಅನಿಲ್ ,ದೀಪು,
ನಿಶ್ಚಯ್ ,ಪ್ರಜ್ವಲ್ ಹಾಗೂ ತಲೆಮರೆಸಿಕೊಂಡಿರುವ ಸುನೀಲ್ ಜೊತೆ ಸೇರಿ ಗ್ಯಾಂಗ್ ಕಟ್ಟಿಕೊಂಡು
ಕಳೆದ ನ.೧೮ರಂದು ಬೆಳಿಗ್ಗೆ ಕಾಲೇಜಿಗೆ ಬಂದ ಅಭಿಷೇಕ್ ನನ್ನು ಅಪಹರಿಸಿ ನೆಲಮಂಗಲ,ದಾಬಸ್ ಪೇಟೆ, ದೇವನಹಳ್ಳಿ ಇನ್ನಿತರ ಕಡೆಗಳಲ್ಲಿ ಸುತ್ತಾಡಿಸಿ ಬೆದರಿಸಿ ಆತನ ಬಳಿಯಿದ್ದ ಸುಮಾರು ೧ಲಕ್ಷದವರೆಗಿನ ಹಣವನ್ನು ಬ್ಯಾಂಕ್ ಗಳಿಂದ ಡ್ರಾ ಮಾಡಿಸಿಕೊಂಡಿದ್ದರು.
ಅಲ್ಲದೇ ಅಭಿಷೇಕ್ ತಂದೆ ಆಟೋ ಚಾಲಕರಾಗಿದ್ದು ಅವರಿಗೆ ಪುತ್ರನ ಸುರಕ್ಷಿತ ಬಿಡುಗಡೆಗೆ ೧೦ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು ಅಷ್ಟು ಹಣವಿಲ್ಲದ ತಂದೆ ತಮ್ಮ ಬಳಿಯ ಚಿನ್ನಾಭರಣಗಳನ್ನು ಅಡವಿಟ್ಟು ೪೫ ಸಾವಿರ ರೂಗಳನ್ನು ಆರೋಪಿಗಳ ಅಕೌಂಟ್ ಗೆ ಹಾಕಿದ್ದರು.
ಬಳಿಕ ಅದೇ ದಿನ ಸಂಜೆ ಅಭಿಷೇಕ್ ನನ್ನು ಉಲ್ಲಾಳದ ಬಳಿ ಬಿಟ್ಟು ತಮ್ಮ ವಿರುದ್ಧ ದೂರು ನೀಡಿದರೆ ನಿನ್ನನ್ನು ಮುಗಿಸಿ ಕುಟುಂಬದವರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು.
ಎರಡು ದಿನಗಳ ಕಾಲ ಹೆದರಿ ಸುಮ್ಮನಿದ್ದ ಅಭಿಷೇಕ್ ಸ್ನೇಹಿತರು ಕುಟುಂಬದವರು ನೀಡಿದ ಧೈರ್ಯದಿಂದ ನಿನ್ನೆ ಅನ್ನಪೂರ್ಣೇಶ್ವರಿನಗರ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಲೋಹಿತ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬ್ಯಾಂಕ್ ಗೆ ಹಣ ಹಾಕಿಸಿಕೊಂಡ ದಾಖಲೆಗಳು ಅಭಿಷೇಕ್ ನೀಡಿದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳೆಲ್ಲರೂ ಮೊದಲ ಬಾರಿಗೆ ಹಣದಾಸೆಗೆ ಅಪಹರಣ ಕೃತ್ಯ ನಡೆಸಿದ್ದು ಬಂಧಿತ ಯಾರಿಗೂ ಯಾವುದೇ ರೀತಿಯ ಅಪರಾಧ ಹಿನ್ನೆಲೆ ಇರುವುದಿಲ್ಲ ಎಂದು ತಿಳಿಸಿದರು.