ವಿದ್ಯಾರ್ಥಿನಿ ಹತ್ಯೆ ಎಬಿವಿಪಿ ಪ್ರತಿಭಟನೆ

ನೇಹಾ ಹಿರೇಮಠ್ ಹತ್ಯೆ ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಿ ಪೊಲೀಸರು ಕರೆದೊಯ್ಯುತ್ತಿರುವುದು.

ಹುಬ್ಬಳ್ಳಿ, ಏ. ೧೯: ತನ್ನ ಪ್ರೀತಿಯನ್ನು ನಿರಾಕರಿಸಿದಳೆಂಬ ಕಾರಣಕ್ಕೆ ಇಲ್ಲಿನ ವಿದ್ಯಾನಗರದ ಕೆ.ಎಲ್.ಇ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ್‌ಳನ್ನು ಅದೇ ಕಾಲೇಜಿನ ವಿದ್ಯಾರ್ಥಿ ಫಯಾಜ್ ನಿನ್ನೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆಯನ್ನು ಖಂಡಿಸಿ ಮಹಾನಗರದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದ್ದು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೇರಿದಂತೆ ಬಹುತೇಕ ಕಡೆಗಳಲ್ಲಿ ಉಗ್ರ ಪ್ರತಿಭಟನೆ ನಡೆಸಿದವು.
ಹು-ಧಾ ಮಹಾನಗರ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠರ ಪುತ್ರಿ ನೇಹಾಳನ್ನು ಅದೇ ಕಾಲೇಜಿನ ವಿದ್ಯಾರ್ಥಿ ಫಯಾಜ್ ಎಂಬಾತ ಪ್ರೀತಿಸುವಂತೆ ಪೀಡಿಸುತ್ತಿದ್ದನಲ್ಲದೇ ಕಿರಿಕಿರಿ ಮಾಡುತ್ತಿದ್ದನೆನ್ನಲಾಗಿದೆ. ನಿನ್ನೆ ಏಕಾಏಕಿ ಕಾಲೇಜು ಆವರಣದಲ್ಲಿಯೇ ಚಾಕುವಿನಿಂದ ನೇಹಾಳನ್ನು ಮನಬಂದಂತೆ ಇರಿದ ಆತ ಅಲ್ಲಿಂದ ಪರಾರಿಯಾಗಿದ್ದ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ನೇಹಾಳನ್ನು ಕಿಮ್ಸ್‌ಗೆ ಒಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಳು.
ಘಟನೆ ಅವಳಿನಗರದ ಜನತೆಯಲ್ಲಿ ದಿಗ್ಭ್ರಮೆ ಮೂಡಿಸಿದ್ದು, ಕಿಮ್ಸ್ ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದರೆ ಎಲ್ಲೆಡೆ ಜನತೆಯಿಂದ ಭಾರೀ ಆಕ್ರೋಶ ವ್ಯಕ್ತವಾಯಿತು.
ಪ್ರತಿಭಟನೆ: ಘಟನೆ ಖಂಡಿಸಿ ನಗರದಲ್ಲಿಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಭಾರಿ ಪ್ರತಿಭಟನೆಗಳು ನಡೆದವಲ್ಲದೇ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಎಲ್ಲೆಡೆ ಆಗ್ರಹ ವ್ಯಕ್ತವಾಯಿತು.
ಕೆಲವೆಡೆ ಟಯರ್‌ಗಳಿಗೆ ಬೆಂಕಿ ಹಚ್ಚಿ ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದರು. ಕೆಲ ಕಡೆಗಳಲ್ಲಿ ರಸ್ತೆ ತಡೆದು ಆಕ್ರೋಶ ಹೊರಹಾಕಲಾಯಿತು. ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಲಾಯಿತು.
ಪ್ರಕರಣದ ಆರೋಪಿ ಮುನವಳ್ಳಿ ಮೂಲದ ಘಯಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಹಾಡುಹಗಲೇ ನಡೆದ ಈ ಭೀಭತ್ಸ ಘಟನೆಯಿಂದ ವಿದ್ಯಾರ್ಥಿನಿಯ ಕುಟುಂಬಸ್ಥರು, ಸಂಬಂಧಿಗಳನ್ನಷ್ಟೇ ಅಲ್ಲದೇ ಮಹಾನಗರದ ಜನತೆಯಲ್ಲೂ ಕಣ್ಣೀರ ಕೋಡಿಯಾಗಿ ಹರಿಸಿದೆ.
ಬಿಗಿ ಪೊಲೀಸ್ ಬಂದೋಬಸ್ತ್:
ಕಾಲೇಜಿನ ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಹು-ಧಾ ಪೊಲೀಸ್ ಕಮೀಷನರೇಟ್ ವತಿಯಿಂದ ನೂರಾರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.
ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ಆರೋಪಿ ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದ್ದು, ನ್ಯಾಯಾಲಯ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗೆ ಕಾನೂನು ಪ್ರಕಾರ ಏನು ಶಿಕ್ಷೆಯಾಗಬೇಕೋ ಅದು ಆಗುತ್ತದೆ ಎಂದು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.