ವಿದ್ಯಾರ್ಥಿನಿ ಚಿಕಿತ್ಸೆಗೆ ಮಾಣಿಕೇಶ್ವರಿ ಸಂಸ್ಥೆ ನೆರವು

ಬೀದರ್:ಜ.25: ಅಪ್ಲ್ಯಾಸ್ಟಿಕ್ ಅನೆಮಿಯಾದಿಂದ ಬಳಲುತ್ತಿರುವ ವಿದ್ಯಾರ್ಥಿನಿಯ ಚಿಕಿತ್ಸೆಗೆ ನೆರವಾಗುವ ಮೂಲಕ ನಗರದ ಮಾತೆ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಮಾನವೀಯತೆ ಮೆರೆದಿದ್ದಾರೆ.
ಸಂಸ್ಥೆಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಸ್ನೇಹಾ ಅವರ ತಂದೆ ರಾಜು ಮಾಳಗೆ ಅವರಿಗೆ ಧನ ಸಹಾಯ ಮಾಡಿದರು.
ಸಂಸ್ಥೆಯ ಅಧ್ಯಕ್ಷ ರಮೇಶ ಕುಲಕರ್ಣಿ ವೈಯಕ್ತಿಕವಾಗಿ ರೂ. 5 ಸಾವಿರ ನೆರವು ನೀಡಿದರು.
ಬಡ ಕುಟುಂಬದ ವಿದ್ಯಾರ್ಥಿನಿ ಅಪ್ಲ್ಯಾಸ್ಟಿಕ್ ಅನೆಮಿಯಾದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ದುಬಾರಿ ವೆಚ್ಚವಾಗಲಿದೆ. ಹೀಗಾಗಿ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ನೆರವಿನ ಹಸ್ತ ಚಾಚಲಾಗಿದೆ. ದಾನಿಗಳು ಹಾಗೂ ಗಣ್ಯರು ಮಾನವೀಯ ನೆಲೆಯಲ್ಲಿ ವಿದ್ಯಾರ್ಥಿನಿ ಕುಟುಂಬಕ್ಕೆ ನೆರವಾಗಬೇಕು ಎಂದು ರಮೇಶ ಕುಲಕರ್ಣಿ ಮನವಿ ಮಾಡಿದರು.
ಮಗಳಿಗೆ ಹೈದರಾಬಾದನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಬೀದರನಲ್ಲಿ ಇದ್ದಾಳೆ. ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಬೇಕಿದೆ. ರೂ. 15 ಲಕ್ಷದಿಂದ 20 ರೂ. ಲಕ್ಷ ವೆಚ್ಚವಾಗಲಿದೆ ಎಂದು ರಾಜು ಮಾಳಗೆ ತಿಳಿಸಿದರು.
ದಾನಿಗಳು ನೆರವು ನೀಡಲು ರಾಜು ಅವರ ಮೊಬೈಲ್ ಸಂಖ್ಯೆ 9606576960 ಗೆ ಸಂಪರ್ಕಿಸಬಹುದು.