ವಿದ್ಯಾರ್ಥಿನಿ ಕೊರಳಲ್ಲಿದ್ದ ಬಂಗಾರದ ಚೈನ್ ಕಿತ್ತುಕೊಂಡು ಪರಾರಿ

ಕಲಬುರಗಿ,ಜು.29-ಗೆಳತಿಯೊಂದಿಗೆ ನಡೆದುಕೊಂಡು ಹೊರಟಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಕೊರಳಲ್ಲಿದ್ದ ಬಂಗಾರದ ಚೈನ್ ಕಿತ್ತುಕೊಂಡು ಸರಗಳ್ಳರಿಬ್ಬರು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.

ನಗರದ ಕಾಲೇಜು ಒಂದರಲ್ಲಿ ಬಿ.ಕಾಂ.ಅಂತಿಮ ವರ್ಷದಲ್ಲಿ ಓದುತ್ತಿರುವ ಚಿತ್ತಾಪುರ ತಾಲ್ಲೂಕಿನ ಮಾಲಗತ್ತಿ ಗ್ರಾಮದ ಕುಮಾರಿ ನಾಗವೇಣಿ ಗೋಂಘಡೆ ಅವರು ಪಿಡಿಎ ಕಾಲೇಜು ಎದರುಗಡೆ ಇರುವ ಬೇಕರಿಯಿಂದ ಬ್ರೆಡ್ ತೆಗೆದುಕೊಂಡು ಗೆಳತಿ ಜೊತೆಗೆ ಪಿಜಿಗೆ ಹೋಗಲು ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಜಾಜ್ ಪಲ್ಸರ್ ಬೈಕ್ ಮೇಲೆ ಬಂದ 25 ರಿಂದ 30 ವರ್ಷ ವಯಸ್ಸಿನ ಇಬ್ಬರು ಯುವಕರು ನಾಗವೇಣಿ ಅವರ ಕೊರಳಲ್ಲಿದ್ದ 30 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಮೆಡಿಕಲ್‍ನಲ್ಲಿಟ್ಟಿದ ಹಣ ಕಳವು
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಎದರುಗಡೆ ಇರುವ ಮೈಸೂರ ಮೆಡಿಕಲ್ ಹಾಲ್ ಶೆಟರ್ ಮೇಲೆತ್ತಿ ಗಲ್ಲಾ ಪೆಟ್ಟಿಗೆಯಲ್ಲಿಟ್ಟಿದ್ದ 10 ಸಾವಿರ ರೂಪಾಯಿ ನಗದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಸಂಬಂಧ ಬಸವರಾಜ ಕೋರವಾರ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.