ವಿದ್ಯಾರ್ಥಿನಿಲಯ, ವಸತಿ ಶಾಲೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರ


ಸಂಜೆವಾಣಿ ವಾರ್ತೆ
 ದಾವಣಗೆರೆ; ೧; ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಆರ್ಥಿಕವಾಗಿ ಬಡವರಾಗಿರುವ, ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಪ.ವರ್ಗ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಸದುದ್ದೇಶದಿಂದ ಹಾಸ್ಟೆಲ್‍ಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.ಅವರು  ಜಿಲ್ಲಾಡಳಿತ ಕಚೇರಿಯ ತುಂಗಾಭದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿನ ಎಲ್ಲಾ ಮೆಟ್ರಿಕ್ ಪೂರ್ವ, ನಂತರದ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರು, ವಾರ್ಡನ್‍ಗಳು, ಅಡುಗೆ ಸಿಬ್ಬಂದಿಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.ದಾವಣಗೆರೆ ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿನಿಲಯಗಳಿವೆ, ಈ ನಿಲಯದ ವಾರ್ಡನ್‍ಗಳಿಗೆ ಈ ಕಾರ್ಯಾಗಾರದ ಮೂಲಕ ಬಹಳ ಸ್ಪಷ್ಟತೆ ನೀಡಲು ತರಬೇತಿ ಹಮ್ಮಿಕೊಳ್ಳಲಾಗಿದೆ. ಹಾಸ್ಟೆಲ್‍ನಲ್ಲಿ ಬಡವರು, ಶೋಷಿತರು, ದಲಿತರು, ಅಲ್ಪಸಂಖ್ಯಾತರು, ಮುಖ್ಯವಾಹಿನಿಯಿಂದ ದೂರ ಇರುವ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಈ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಶಿಕ್ಷಣವನ್ನು ನೀಡುವುದರ ಜೊತೆಗೆ ವಸತಿ ಮತ್ತು ಊಟದ ಸೌಲಭ್ಯಗಳನ್ನು ಕೊಡುತ್ತಿರುವುದು ಬಹುಶಃ ಇದು ಬೇರೆ ದೇಶಗಳಿಗೂ ಕೂಡ ಮಾದರಿಯಾಗಿದೆ.ಕಳೆದ ಕೆಲವು ತಿಂಗಳ ಹಿಂದೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಓದುತ್ತಿರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಕಸ್ಮಿಕವಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಸಮಸ್ಯೆಯಾಗಿರುವುದನ್ನು ಕಾಣಲಾಗಿದೆ.  ಇದಕ್ಕೆ ಕಾರಣ ನಮ್ಮ ಕರ್ತವ್ಯಗಳನ್ನು ನಾವು ಸರಿಯಾಗಿ ಮಾಡದಿರುವುದರಿಂದ ಘಟನೆಗಳಾಗಿವೆ. ಹಾಸ್ಟೆಲ್‍ನಲ್ಲಿ ಶಿಕ್ಷಣ, ಶಿಸ್ತುಬದ್ದ ನಿರ್ವಹಣೆ, ಸುಚಿತ್ವ ಮತ್ತು ರುಚಿಯಾದ ಊಟವನ್ನು ವಿದ್ಯಾರ್ಥಿಗಳಿಗೆ ನಾವು ಹೇಗೆ ಕೊಡಬೇಕು  ಎಂದು ತಿಳಿದುಕೊಂಡು ಎಲ್ಲಾ ವಿದ್ಯಾರ್ಥಿಗಳ ಬಗ್ಗೆ ಸಂಪೂರ್ಣ ನಿಗಾವಹಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
 ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ಮಾತಾನಾಡಿ ಕಳೆದ ಬಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಸ್ಪೂರ್ತಿಯ ನಡೆ ಒಂದು ಕಾರ್ಯಕ್ರಮವಾಗಿ ಬಜೆಟ್‍ನಲ್ಲಿ ಘೋಷಣೆಯಾಗಿದೆ. ನಮ್ಮ ದೇಹದ ಆರೋಗ್ಯ ಮತ್ತು ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಪ್ರತಿವಾರ ಪ್ರಾಧ್ಯಾಪಕರುಗಳಿಂದ ಏರ್ಪಡಿಸಲಾಗುತ್ತಿತ್ತು, ಇದಕ್ಕೆ ಹೆಚ್ಚಿನ ಸ್ಪಂದನೆ ಕೂಡ ಸಿಕ್ಕಿತ್ತು, ಇಂತಹ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಮಾಡಬೇಕೆಂದರು.ಹಾಸ್ಟೆಲ್‍ಗಳಲ್ಲಿ ಊಟ, ವಸತಿ ನಿರ್ವಹಣೆ ಬಗ್ಗೆ ವಾರ್ಡನ್‍ಗಳ ವಾಟ್ಸಪ್ ಗ್ರೂಪ್ ರಚನೆ ಮಾಡಿಕೊಂಡು ಕುಂದುಕೊರತೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು.  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬೇಬಿ ಸುನೀತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಗಾಯತ್ರಿ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.