ವಿದ್ಯಾರ್ಥಿನಿಯ ಚಿಕಿತ್ಸೆಗೆ ಆರ್ಥಿಕ ನೆರವು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.20: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಏಳನೇ ತರಗತಿಯ ವಿದ್ಯಾರ್ಥಿನಿ ಯಶಸ್ವಿನಿ ಹೃದಯದ ಪಕ್ಕದ ಮೂಳೆ ಸವೆತದಿಂದ ಬಳಲುತ್ತಿದ್ದು ಸೂಕ್ತ ಚಿಕಿತ್ಸೆ ಕೊಡಿಸಲು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯವರು ಮೂರು ಲಕ್ಷ ರೂಗಳ ಅಂದಾಜು ವೆಚ್ಚವನ್ನು ತಿಳಿಸಿದ್ದರು.
ಕುಟುಂಬವು ಬಡತನದಿಂದ ಬಳಲುತ್ತಿದ್ದು ಬಾಲಕಿಯ ಚಿಕಿತ್ಸೆಗೆ ಹಣ ಹೊಂದಿಸಲು ಕುಟಂಬಸ್ಥರು ಪರದಾಡುತ್ತಿದ್ದರು. ವಿಷಯ ತಿಳಿದ ಮಿತ್ರ ಫೌಂಡೇಶನ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ ರವರು ಬಾಲಕಿಯ ಹೆಚ್ಚಿನ ಚಿಕಿತ್ಸೆಗಾಗಿ ತಮ್ಮ ಮಿತ್ರ ಫೌಂಡೇಷನ್ ವತಿಯಿಂದ ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ರಾಮೇಗೌಡ ನಾನು ರೈತ ಕುಟುಂಬದಿಂದ ಬಂದವನು. ರೈತ ಕುಟುಂಬಗಳ ಸಂಕಷ್ಟದ ಅರಿವು ನನಗಿದೆ. ನನ್ನ ಸಂಪಾದನೆಯ ಒಂದು ಭಾಗವನ್ನು ಮಿತ್ರ ಪೌಂಡೇಷನ್ ಮೂಲಕ ಬಡವರ ನೆರವಿಗೆ ಮೀಸಲಿಟ್ಟಿದ್ದೇನೆ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಬಡವರ ಕೈಗೆ ನಿಲುಕುವಂತಾಗಬೇಕು. ವರ್ತಮಾನದಲ್ಲಿ ಈ ಎರಡೂ ಕ್ಷೇತ್ರಗಳೂ ಬಡವರ ಬದುಕಿಗೆ ಹೊರೆಯಾಗುತ್ತಿವೆ. ಉಳ್ಳವರು ಇಲ್ಲದವರ ಬದುಕಿಗೆ ನೆರವಾಗಬೇಕೆಂಬ ಸದಾಶಯ ನನ್ನದು. ನಾನು ರಾಜಕೀಯ ಕ್ಷೇತ್ರದಲ್ಲಿದ್ದರೂ ರಾಜಕಾರಣವನ್ನು ದೂರವಿಟ್ಟು ಸಮಾಜದ ಒಳಿತಿಗೆ ನನ್ನ ಸೇವೆ ಮೀಸಲು ಎಂದರು.