ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ

ಮಂಗಳೂರು,ಮಾ.೪-ಪ್ರೇಮ ವೈಫಲ್ಯದಿಂದ ಆಕ್ರೋಶಗೊಂಡ ದುಷ್ಕರ್ಮಿಯೊಬ್ಬ ಸರಕಾರಿ ಕಾಲೇಜಿನ ಮೂವರು ಪಿಯುಸಿ ವಿದ್ಯಾರ್ಥಿನಿಯರ ಆಸಿಡ್ ಎರಚಿ ಮೃಗೀಯ ಕೃತ್ಯ ನಡೆದಿದ್ದು, ಜಿಲ್ಲೆಯ ಜನತೆ ಬೆಚ್ಚಿಬಿದ್ದಿದೆ.ವಿದ್ಯಾರ್ಥಿನಿಯರಾದ ಅಲೀನಾ ಸಿಬಿ, ಅರ್ಚನಾ, ಅಮೃತ ಎನ್ನುವ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ನಡೆಸಿದ ಭಗ್ನಪ್ರೇಮಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿ ಕೇರಳ ಮೂಲದ ಅಬಿನ್ನನ್ನು ತೀವ್ರ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಆಸಿಡ್ ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿನಿಯರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.ದಾಳಿಗೊಳಗಾದ ಮೂವರು ವಿದ್ಯಾರ್ಥಿನಿಯರು ಕಡಬದ ಸರಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು.ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಹ್ಯಾಟ್ ಹಾಕಿದ್ದ ಕಿರಾತಕ ಏಕಾಏಕಿ ವಿದ್ಯಾರ್ಥಿನಿಯರ ಮೇಲೆ ಆಸಿಡ್ ಹಾಕಿದ್ದಾನೆ. ಆಸಿಡ್ ಮುಖಕ್ಕೆ ಬೀಳುತ್ತಿದ್ದಂತೆ ವಿದ್ಯಾರ್ಥಿನಿಯರು ಕಿರುಚಾಡಿ ನೆರವಿಗೆ ಅಂಗಲಾಚಿದ್ದಾರೆ.ಆಸಿಡ್ ದಾಳಿಗೆ ಒಳಗಾದ ವಿದ್ಯಾರ್ಥಿನಿಯರನ್ನು ಸ್ಥಳೀಯರು ಕಡಬ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಮೂವರು ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆಗೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕಾಲೇಜು ವರಾಂಡದಲ್ಲಿ ಪರೀಕ್ಷಾ ತಯಾರಿ ನಡೆಸುವ ವೇಳೆ ಈ ದುರ್ಘಟನೆ ನಡೆದಿದ್ದು, ಆಸಿಡ್ ಹಾಕಿ ಎರಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಆಸಿಡ್ ದಾಳಿಗೆ ಪ್ರೇಮ ವೈಫಲ್ಯವೇ ಕಾರಣವಾಗಿದ್ದು, ಆರೋಪಿ ಅಬೀನ್ ಅಲಿನಾಳನ್ನು ಗುರಿಯಾಗಿಸಿಕೊಂಡಿದ್ದು ಆಕೆಯ ಜೊತೆಗೆ ಇನ್ನಿಬ್ಬರು ವಿದ್ಯಾರ್ಥಿನಿಯರು ಆಸಿಡ್ ದಾಳಿಗೆ ಒಳಗಾಗಿದ್ದಾರೆ.ಅಲಿನಾ ಹಾಗೂ ಅಬೀನ್ ಇಬ್ಬರು ಒಂದೇ ಕೋಮಿಗೆ ಸೇರಿದ್ದರು. ಕೇರಳ ಮಲಪುರಂ ಜಿಲ್ಲೆಯ ನೆಲಂಬೂರು ನಿವಾಸಿ ಅಬೀನ್ ಅಲಿನಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಅಲೀನಾ ಆತನ ಪ್ರೇಮವನ್ನು ನಿರಾಕರಿಸಿದ್ದು, ಇದರಿಂದಾಗಿ ರೊಚ್ಚಿಗೆದ್ದು ಪರೀಕ್ಷೆ ಸಮಯ ನೋಡಿಕೊಂಡು ಆಸಿಡ್ ದಾಳಿ ನಡೆಸಿದ್ದಾನೆ.
ಆಸಿಡ್ ಹಾಕಿ ಆರೋಪಿ ಅಬೀನ್ ಪರಾರಿ ಆಗಲು ಯತ್ನಿಸಿದ ಕೂಡಲೇ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರ ಪೋಷಕರು ಈ ಘಟನೆಯಿಂದ ಕಂಗಲಾಗಿದ್ದು, ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ.
ಕಾಲೇಜು ಆವರಣದಲ್ಲೇ ಆಸಿಡ್ ದಾಳಿ ನಡೆದಿರುವುದನ್ನು ಕಂಡ ಇತರೆ ವಿದ್ಯಾರ್ಥಿನಿಯರು ಆತಂಕಕ್ಕೊಳಗಾಗಿದ್ದು, ಘಟನಾ ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ಥ್ ಕೈಗೊಳ್ಳಲಾಗಿದೆ.