ವಿದ್ಯಾರ್ಥಿನಿಯರು ಸ್ತ್ರೀ ರಕ್ಷಣೆಯ ಕಾನೂನುಗಳನ್ನು ಅರಿತುಕೊಳ್ಳಲು ಕರೆ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜು.20:  ಹೆಣ್ಣು ಅಬಲೆಯಲ್ಲ ಸಬಲೆ, ಅಲ್ಲದೇ ನಾವು ಗಂಡಿಗೆ ಸರಿ ಸಮಾನರು ಎಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಬೀಬಿ ಮರೇಮ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಎಸ್ಎಲ್ಎನ್ಎ ಶಿಕ್ಷಣ ಸಂಸ್ಥೆಯ ಪ್ರಿಯದರ್ಶಿನಿ ಸ್ವ.ಪ.ಪೂ.ಕಾಲೇಜಿನ ಎನ್ಎಸ್ಎಸ್ ಘಟಕದವತಿಯಿಂದ ಆಯೋಜಿಸಿದ್ದ ಬಾಲ್ಯವಿವಾಹ ತಡೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿಸುವುದು ಕಾನೂನಿನ ಪ್ರಕಾರ ಅಪರಾಧ.  ಬಾಲ್ಯ ವಿವಾಹ ನಡೆಯುವ ಕುರಿತು ವಿಚಾರವನ್ನು ನಮ್ಮ ಗಮನಕ್ಕೆ ತನ್ನಿ. ಆ ಸಂದರ್ಭಗಳಲ್ಲಿ 112 ಅಥವಾ 1098 ಗೆ ಫೋನ್ ಮಾಡಿ ವಿಷಯ ತಿಳಿಸುವುದರಿಂದ ಒಂದು ಹೆಣ್ಣಿನ ಜೀವನವನ್ನು ಉಳಿಸಿದಂತಾಗುತ್ತದೆ ಎಂದರು.
ವಿದ್ಯಾರ್ಥಿನಿಯರು ನಿಮ್ಮ ಶಾಲೆ ಇರುವ  ಅಥವಾ ಆಯಾ ವಾರ್ಡಿನ ಪೊಲೀಸರ ಫೋನ್ ನಂಬರ್ ನಿಮ್ಮ ಬಳಿ ಇರಲಿ. ನಿಮ್ಮ ಅಕ್ಕಪಕ್ಕದಲ್ಲಾಗಲಿ ಅಥವಾ ರಸ್ತೆಯಲ್ಲಾಗಲೀ ಯಾರಾದರೂ ಚುಡಾಯಿಸಿದರೆ ಅಥವಾ ಬೈಕ್‌ನಲ್ಲಿ ಬಂದು  ತೊಂದರೆ ನೀಡಿದಲ್ಲಿ ಬೈಕ್ ನಂಬರ್ ಬರೆದುಕೊಂಡು ನಮಗೆ ಕಾಲ್ ಮಾಡಿ, ಐದರಿಂದ ಹತ್ತು ನಿಮಿಷದಲ್ಲಿ ಆ ಸ್ಥಳಕ್ಕೆ ಆಗಮಿಸಿ ನಿಮಗೆ ರಕ್ಷಣೆ ನೀಡಿ, ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ನಮ್ಮ ಪೊಲೀಸ್ ಇಲಾಖೆಯಿಂದ 112 ಎಂಬ ವಾಹನ ಇದ್ದು, ಕೇವಲ ಅಪಘಾತಕ್ಕೆ ಮಾತ್ರವಲ್ಲದೇ ಎಲ್ಲಾ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಾರೆ. ಯಾವ ಸಂದರ್ಭದಲ್ಲಾಗಲಿ ನಿಮ್ಮ ಸಹಾಯಕ್ಕೆ ಬರುತ್ತಾರೆ ಎಂದರು.
ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿನಿಯರು ಅಪರಿಚಿತರು ನೀಡುವ ತಿಂಡಿ ತಿನಿಸುಗಳ ಕುರಿತು ಎಚ್ಚರದಿಂದಿರಿ. ಅವರುಗಳು ತಿಂಡಿ ತಿನಿಸಿನ ಆಮಿಷ ಒಡ್ಡಿ ನಿಮ್ಮನ್ನು ಟ್ರಾಪ್ ಮಾಡಲು ಪ್ರಯತ್ನಿಸುತ್ತಾರೆ. ಆ ಕುರಿತು ಎಚ್ಚರದಿಂದಿರಿ ಎಂದು ವಿದ್ಯಾರ್ಥಿನಿಯರಿಗೆ ಎಚ್ಚರಿಸಿದರು.
ನಂತರ ಕಾಲೇಜಿನ ಪ್ರಾಚಾರ್ಯ ಎಂ ಅಶೋಕ ಮಾತನಾಡಿ, ಹೆಣ್ಣು ಮಕ್ಕಳ ರಕ್ಷಣೆಗೆ ವಿಶೇಷ ಕಾನೂನುಗಳಿದ್ದು, ಅವುಗಳನ್ನು ಅರಿತುಕೊಳ್ಳಿ. ಅಲ್ಲದೇ ಬಾಲ್ಯವಿವಾಹಗಳ ಕುರಿತು ನಿಮ್ಮ ಅರಿವಿಗೆ ಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದರು.
ಕಾಲೇಜಿಗೆ ಬರುವಾಗ ಕಿಡಿಗೇಡಿಗಳಿಂದ ತೊಂದರೆಯಾದರೇ ತಕ್ಷಣ ಪೊಲೀಸ್ ಠಾಣೆಗೆ ಕರೆ ಮಾಡಿ, ಅವರು ನಿಮ್ಮ ರಕ್ಷಣೆಗೆ ಬರುತ್ತಾರೆ ಎಂದು ವಿದ್ಯಾರ್ಥಿನಿಯರಿಗೆ ಧೈರ್ಯದಿಂದಿರಲು ಸೂಚಿಸಿದರು.
ಈ ಸಂದರ್ಭದಲ್ಲಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪಿ.ರಾಮಚಂದ್ರ, ಪಿಸಿ ಹಾಲೇಶ್, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.