ವಿದ್ಯಾರ್ಥಿನಿಯರು – ಪಾಲಕರಿಂದ ಭಾರೀ ಆಕ್ರೋಶ

ಕಾನ್ವೆಂಟ್ ಗೇಟ್ ಮುಂದೆ ಘನತ್ಯಾಜ್ಯ ವಿಲೇವಾರಿ ವಾಹನಗಳ ನಿಲುಗಡೆ
ರಾಯಚೂರು.ಜು.೨೦- ನಗರದ ಕಾನ್ವೆಂಟ್ ಶಾಲೆಯ ಮುಂಭಾಗದಲ್ಲಿ ಘನತ್ಯಾಜ್ಯ ವಿಲೇವಾರಿಯ ವಾಹನಗಳನ್ನು ನಿಲ್ಲಿಸಿದ ನಗರಸಭೆ ವಿರುದ್ಧ ವಿದ್ಯಾರ್ಥಿನಿಯರು ಮತ್ತು ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಹಾಗೂ ನೂರಾರು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಕಾರ್ಯ ನಿರ್ವಹಿಸುತ್ತಾರೆ. ಪ್ರತಿನಿತ್ಯ ಸಂಜೆ ಏಕಕಾಲಕ್ಕೆ ವಿದ್ಯಾರ್ಥಿನಿಯರು ಶಾಲಾವರಣದಿಂದ ಮನೆಗೆ ತೆರಳಲು ಗೇಟ್ ಮೂಲಕ ಹೊರ ಬರುತ್ತಾರೆ. ಆದರೆ, ಶಾಲೆಯ ಕಾಂಪೌಂಡ್‌ಗೆ ಹೊಂದಿಕೊಂಡು ಗೇಟ್ ವರೆಗೂ ನಗರಸಭೆ ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು ನಿಲ್ಲಿಸಿದ ಘಟನೆಯಿಂದ ವಿದ್ಯಾರ್ಥಿನಿಯರು ನಿನ್ನೆ ಹೊರ ಬರಲು ಭಾರೀ ತೊಂದರೆ ಅನುಭವಿಸುವಂತಹ ಪ್ರಸಂಗ ನಿರ್ಮಾಣವಾಯಿತು. ಇದರಿಂದ ಅಲ್ಲಿಯ ಪಾಲಕರು ಮತ್ತು ವಿದ್ಯಾರ್ಥಿನಿಯರು ಭಾರೀ ಅಸಾಮಾಧಾನಗೊಂಡ ಘಟನೆ ನಡೆಯಿತು.
ಪ್ರಾಥಮಿಕ ಹಂತದಿಂದ ಪ್ರೌಢ ಶಾಲೆವರೆಗೂ ತರಗತಿ ನಡೆಸಲಾಗುತ್ತದೆ. ನಿತ್ಯ ಮುಂಜಾನೆ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಸಂಜೆ ಮನೆಗಳಿಗೆ ಹಿಂದುರಿಗುತ್ತಾರೆ. ಬೆನ್ನಿಗೆ ಭಾರವಾದ ಪುಸ್ತಕಗಳ ಬ್ಯಾಗ್ ಮತ್ತು ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದು ನೂರಾರು ಸಂಖ್ಯೆಯಲ್ಲಿ ಏಕಕಾಲಕ್ಕೆ ಹೊರಬೆ ಬರುವ ವಿದ್ಯಾರ್ಥಿಗಳು ಸುಗಮವಾಗಿ ತಮ್ಮ ತಮ್ಮ ವಾಹನಗಳಲ್ಲಿ ಮನೆಗಳಿಗೆ ತೆರಳಲು ಅವಕಾಶವಿಲ್ಲದಂತೆ ನಗರಸಭೆ ಘನತ್ಯಾಜ್ಯ ವಿಲೇವಾರಿಯ ವಾಹನಗಳನ್ನು ಶಾಲೆಯ ಗೇಟ್ ಮುಂದೆ ನಿಲ್ಲಿಸಿರುವುದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ನಗರದ ವಿವಿಧ ವಾರ್ಡ್‌ಗಳ ಘನತ್ಯಾಜ್ಯ ವಿಲೇವಾರಿಗೆ ಬಳಕೆಯಾಗುವ ಈ ವಾಹನಗಳು ದುರ್ವಾಸನೆಯಿಂದ ಕೂಡಿರುತ್ತವೆ. ಇಂತಹ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುವ ಶಾಲೆಯ ಮುಂದೆ ವಾಹನಗಳನ್ನು ನಿಲ್ಲಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ನಗರಸಭೆ ಈ ರೀತಿಯ ಅವೈಜ್ಞಾನಿಕ ನಿರ್ಧಾರಗಳು ಕೈಗೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಗೊಂಡಿದೆ. ನಿನ್ನೆ ಸಂಜೆ ಪಾಲಕರು ವಾಹನಗಳ ಫೋಟೋ ಮತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರಸಭೆ ಈ ಬಗ್ಗೆ ಎಚ್ಚೆತ್ತುಕೊಂಡು ತಕ್ಷಣದಿಂದಲೆ ಜಾರಿಗೆ ಬರುವಂತೆ ನಗರಸಭೆಯ ಎಲ್ಲಾ ವಾಹನಗಳನ್ನು ಬೇರೆಡೆ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನಾದರೂ ನಗರಸಭೆ ಈ ಬಗ್ಗೆ ಗಮನ ಹರಿಸಿ, ತುರ್ತು ಕ್ರಮ ಕೈಗೊಳ್ಳುವುದೆ?.