ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಪ್ರಾಧ್ಯಾಪಕ ಸಸ್ಪೆಂಡ್!


ಶಿವಮೊಗ್ಗ, ಜು. 22: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ
ಗುರಿಯಾಗಿದ್ದ ಶಿವಮೊಗ್ಗ ಸರ್ಕಾರಿ ಮೆಡಿಕಲ್ ಕಾಲೇಜ್ (ಸಿಮ್ಸ್) ಸಹ
ಪ್ರಾಧ್ಯಾಪಕನನ್ನು ಅಮಾನತ್ತುಗೊಳಿಸಲಾಗಿದೆ. ಇಲಾಖಾ ವಿಚಾರಣೆಗೆ ಆದೇಶ
ಹೊರಡಿಸಲಾಗಿದೆ.
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ
ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರಿಗೆ ಮನವಿ
ಪತ್ರ ಅರ್ಪಿಸಿದ್ದವು. ಪ್ರಾಧ್ಯಾಪಕನ ವಿರುದ್ದ ಕ್ರಮ ಜರುಗಿಸಬೇಕೆಂದು
ಆಗ್ರಹಿಸಿದ್ದವು.
ಈ ಕುರಿತಂತೆ ಜಿಲ್ಲಾಧಿಕಾರಿಗಳು ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು.
ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತರು ಮಾಹಿತಿ ಸಂಗ್ರಹಿಸಿ, ಸಹ ಪ್ರಾಧ್ಯಾಪಕನ
ಅಮಾನತ್ತು ಆದೇಶ ಹೊರಡಿಸಿದ್ದಾರೆ.
ಘಟನೆ ಹಿನ್ನಲೆ: ಕಳೆದ ಜು. 15 ರಂದು ಉತ್ತರ ಭಾರತ ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ,
ಐದೂವರೆ ವರ್ಷದ ವ್ಯಾಸಂಗ ಪೂರ್ಣಗೊಳಿಸಿ ನಿರಾಪೇಕ್ಷಣಾ ಪತ್ರ ಪಡೆಯಲು ಕಾಲೇಜ್ ಗೆ
ಬಂದಿದ್ದರು. ಅಂದು ಒಪಿಡಿ ವಿಭಾಗದ ಸದ್ಯ ಅಮಾನತ್ತುಗೊಂಡಿರುವ ಸಹ ಪ್ರಾಧ್ಯಾಪಕನು
ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿತ್ತು.
ಈ ಕುರಿತಂತೆ ವಿದ್ಯಾರ್ಥಿನಿ ಸಿಮ್ಸ್ ನಿರ್ದೇಶಕರಿಗೆ ದೂರು ನೀಡಿದ್ದಳು. ಇದರ ಆಧಾರದ
ಮೇಲೆ ಕಾಲೇಜ್ ನಲ್ಲಿರುವ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವ ವಿಭಾಗಕ್ಕೆ ತನಿಖೆ
ನಡೆಸಲು ಶಿಫಾರಸ್ಸು ಮಾಡಲಾಗಿತ್ತು. ವಿದ್ಯಾರ್ಥಿನಿಯು ತಪ್ಪು ಗ್ರಹಿಕೆಯಿಂದ ಸಹ
ಪ್ರಾಧ್ಯಾಪಕನ ಮೇಲೆ ದೂರು ನೀಡಿದ್ದಾಳೆ ಎಂದು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ
ನಡೆಸಲಾಗಿತ್ತು.
ಕಾಲೇಜು ಆಡಳಿತ ಮಂಡಳಿಯ ಕ್ರಮಕ್ಕೆ ಅಸಮಾಧಾನಗೊಂಡ ವಿದ್ಯಾರ್ಥಿನಿಯು, ಪ್ರಗತಿಪರ
ಸಂಘಟನೆಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿದ್ದಳು.