ವಿದ್ಯಾರ್ಥಿಗೆ ಗುರಿ, ಧೈರ್ಯ, ಪ್ರಮಾಣಿಕ ಪ್ರಯತ್ನ ಇದ್ದಾಗ ಎಲ್ಲವನ್ನು ಸಾಧಿಸಬಹುದು :ಡಾ.ಬಿ.ಜಿ. ಮೂಲಿಮನಿ

ಬೀದರ:ಸೆ.13:ಮಕ್ಕಳಲ್ಲಿ ಒಂದೇ ರೀತಿಯ ಸೃಜನಶೀಲತೆ ಅಡಗಿರುತ್ತದೆ. ಅದನ್ನು ಹೊರತೆಗೆಯಬೇಕಾಗಿದ್ದು ಶಿಕ್ಷಕರ ಕೆಲಸ. ವಿದ್ಯಾರ್ಥಿಯು ದೊಡ್ಡದಾದ ಗುರಿ, ಧೈರ್ಯ ಮತ್ತು ಪ್ರಮಾಣಿಕ ಪ್ರಯತ್ನದಿಂದ ಮುಂದುವರೆದರೆ ಎಲ್ಲವನ್ನು ಸಾಧಿಸಬಹುದು ಎಂದು ವಿದ್ಯಾಭಾರತಿ ಜಿಲ್ಲಾ ಘಟಕ ಬೀದರದ ಜ್ಞಾನ-ವಿಜ್ಞಾನ ಮೇಳಕ್ಕೆ ಉದ್ಘಾಟಕರಾಗಿ ಆಗಮಿಸಿದ ವಿಶ್ರಾಂತ ಕುಲಪತಿಗಳಾದ ಡಾ|| ಬಿ.ಜಿ. ಮೂಲಿಮನಿ ಅವರು ಹೇಳಿದರು. ಪ್ರತಿಭೆಗೆ ಬಡತನವಾಗಲಿ, ಮೇಲುಕೀಳಾಗಲಿ ಅಡ್ಡಿ ಆಗಬಾರದು. ಸಾಧಿಸುವ ಛಲ ಇರಬೇಕು. ಈ ಛಲ ಚಿಕ್ಕ ವಯಸ್ಸಿನಿಂದಲೇ ಪ್ರಾರಂಭವಾಗಬೇಕು. ವಯಸ್ಸು ಆದಂತೆ ಸೃಜನಶೀಲತೆ ಕಡಿಮೆಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಈಗಿನಿಂದಲೆ ಸೃಜನಶೀಲತೆಯಿಂದ ಅಧ್ಯಯನಶೀಲರಾಗಬೇಕು ಎಂದು ಹೇಳಿದರು. ಜ್ಞಾನಕ್ಕೆ ಸಮಾನವಾದ ವಸ್ತು ಮತ್ತೊಂದಿಲ್ಲ, ಹಾಗಾಗಿ ಇಂತಹ ಮೇಳಗಳಿಂದ ವಿದ್ಯಾರ್ಥಿಗಳು ಹೆಚ್ಚೆಚ್ಚು ಜ್ಞಾನ ಸಂಪಾದಿಸುವಂತೆ ಆಗಬೇಕು ಎಂದು ಹೇಳಿದರು. ಕಲ್ಪನಾ ಶಕ್ತಿ, ಆತ್ಮ ಶಕ್ತಿ ಹಾಗೂ ಕುತೂಹಲ ಈ ಗುಣಗಳು ಮಕ್ಕಳಲ್ಲಿದ್ದಾಗ ಯಾವುದೇ ವಿಷಯವನ್ನು ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ವಿಜಯಕುಮಾರ ಬೆಳಮಗಿ ಅವರು ಇಂದು ದ್ವಾಪರಯುಗ, ತ್ರೇತಾಯುಗ, ಕಲಿಯುಗಗಳು ಇಲ್ಲ. ಈಗಿರುವುದೊಂದೆ ಜ್ಞಾನಯುಗ. ಯಾರಲ್ಲಿ ಜ್ಞಾನವಿದೆಯೋ ಅವರು ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು. ಬೀದರ ಜಿಲ್ಲೆಯ ವಿದ್ಯಾರ್ಥಿಗಳು ಯಾವುದರಲ್ಲೂ ಹಿಂದಿಲ್ಲ. ಅವರು ಮನಸ್ಸು ಮಾಡಿದರೆ ಎಲ್ಲವನ್ನು ಸಾಧಿಸಬಲ್ಲರು ಎಂದು ಮಕ್ಕಳ ಮನಮುಟ್ಟುವಂತೆ ನುಡಿದರು.

ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಜ್ಞಾನ-ವಿಜ್ಞಾನ ಮೇಳದ ಪ್ರಾಂತ ಪ್ರಮುಖರಾದ ಮನ್ಸೂರು ಅವಟಿ ಅವರು ಮಾತನಾಡುತ್ತ ವಿದ್ಯಾಭಾರತಿ ಜಿಲ್ಲಾ ಮಟ್ಟ, ಪ್ರಾಂತ ಮಟ್ಟ ಹಾಗೂ ರಾಷ್ಟ್ರ ಮಟ್ಟದವರೆಗೂ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಅದರಲ್ಲಿ ಒಂದು ಜ್ಞಾನ-ವಿಜ್ಞಾನ ಮೇಳ. ಇದು ಮಕ್ಕಳ ಮನೋವಿಕಾಸದ ಜೊತೆಗೆ ಹೊಸ ಹೊಸ ಜ್ಞಾನ ಸಂಪಾದನೆ ಮಾಡಲು ಪ್ರೇರಣಾದಾಯಿಯಾಗಿದೆ. ಯಾವ ಸ್ಥಾನ ಗಳಿಸುವುದು ಮುಖ್ಯವಲ್ಲ, ಯಾವ ರೀತಿಯ ತಯ್ಯಾರಿ ಮಾಡುತ್ತೇವೆ ಹಾಗೂ ಯಾವ ರೀತಿ ಭಾಗವಹಿಸುತ್ತೇವೆ ಎಂಬುದು ಬಹಳ ಮುಖ್ಯ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿರುವ ವಿದ್ಯಾಭಾರತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರೊ|| ಎಸ್.ಬಿ. ಸಜ್ಜನಶೆಟ್ಟಿ ಅವರು ಮಾತನಾಡುತ್ತ ವಿದ್ಯಾಭಾರತಿ ಪ್ರತಿ ವರ್ಷವೂ ಜ್ಞಾನ-ವಿಜ್ಞಾನ ಮೇಳ, ಕ್ರೀಡಾಕೂಟ, ಶಿಕ್ಷಕರ ಪ್ರಶಿಕ್ಷಣ ವರ್ಗ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ನಡೆಸುವುದರ ಮೂಲಕ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು. ಸ್ಪರ್ಧೆಗಳಲ್ಲಿ ಸೋಲು-ಗೆಲವು ಸಹಜ. ಅದನ್ನು ಸಮಾನವಾಗಿ ಸ್ವೀಕರಿಸಬೇಕು. ಸಮಾನವಾಗಿ ಸ್ವೀಕರಿಸುವುದು ನಮ್ಮಲ್ಲಿ ಸಾಮಥ್ರ್ಯ ಮತ್ತು ತಾಳ್ಮೆಯನ್ನು ಹೆಚ್ಚಿಸುತ್ತದೆ. ಯಾರು ಸಂಸ್ಕಾರಭರಿತರಾಗಿರುತ್ತಾರೊ ಅವರು ಎಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತಾರೆ ಎಂದು ನುಡಿದರು.

ಸಮಾರೋಪ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ ಮೂಳೆ ಮತ್ತು ಕೀಲು ತಜ್ಞರಾದ ಡಾ|| ಎನ್.ಕೆ. ಅರುಣಕುಮಾರ ಅವರು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಉಪಾಧ್ಯಕ್ಷರಾದ ನಾಗೇಶರೆಡ್ಡಿಯವರು ಸಮಾರೋಪದ ನುಡಿಗಳನ್ನು ನುಡಿದರು.

ವಿದ್ಯಾಭಾರತಿ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಭಗುಸಿಂಗ್ ಜಾಧವ ಅವರು ಸ್ವಾಗತ ಪರಿಚಯವನ್ನು ಮಾಡುತ್ತ ವಿದ್ಯಾಭಾರತಿಯ ಉದ್ದೇಶ, ರೂಪರೇಷೆಗಳು ಹಾಗೂ ಕಾರ್ಯವ್ಯಾಪ್ತಿಯನ್ನು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ವಿದ್ಯಾರಣ್ಯ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪ್ರತಿಭಾ ಚಾಮಾ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು.