ವಿದ್ಯಾರ್ಥಿನಿಗೆ ಇರಿದ ಪಾಗಲ್ ಪ್ರೇಮಿ

ಯುವತಿ ಸ್ಥಿತಿ ಗಂಭೀರ
ಬೆಂಗಳೂರು,ಆ.೨೮-ತನ್ನ ಪಾಡಿಗೆ ತಾನು ಇಂದು ಬೆಳಿಗ್ಗೆ ಕಾಲೇಜಿಗೆ ಹೋಗುತ್ತಿದ್ದ ಯುವತಿಯೊಬ್ಬಳನ್ನು ಕಾಲೇಜಿನ ಆವರಣದಲ್ಲೇ ಪಾಗಲ್ ಪ್ರೇಮಿಯೊಬ್ಬ ಚೂರಿಯಿಂದ ಇರಿದು ರಕ್ತಸ್ರಾವವಾಗುತ್ತಿದ್ದ ಆಕೆಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ ಸಿನಿಮೀಯ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದ ಮಹಿಳಾ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ಸಂಜನಾಳ ಮೇಲೆ ದಾಳಿ ನಡೆಸಿದ ಪಾಗಲ್ ಪ್ರೇಮಿ ಪರಾರಿಯಾಗುವಾಗ ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ವಿದ್ಯಾರ್ಥಿನಿ ಸಂಜನಾ ಕಾಲೇಜು ಆವರಣ ಪ್ರವೇಶಿಸುವ ವೇಳೆ ಆವರಣದಲ್ಲಿಯೇ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಪೈಕಿ ಆರೋಪಿ ಕಾರಿನಿಂದ ಕೆಳಗಿಳಿದು ಆಕೆಗೆ ಚೂರಿಯಿಂದ ಇರಿದು ಆಕೆಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿಂದ ಪರಾರಿಯಾಗುವ ಪ್ರಯತ್ನದಲ್ಲಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಕನಕಪುರದ ದಾಳಿಂಬ ಗ್ರಾಮದ ಡಿ.ಎನ್ ಚೇತನ್ ಕೃತ್ಯ ನಡೆಸಿ ಸಿಕ್ಕಿಬಿದ್ದ ದುಷ್ಕರ್ಮಿಯಾಗಿದ್ದು ಆತನನ್ನು ಬಂಧಿಸಿ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ಬೆಚ್ಚಿ ಬಿದ್ದ ವಿದ್ಯಾರ್ಥಿಗಳು:
ವಿದ್ಯಾರ್ಥಿನಿ ಸಂಜನಾ ಕನಕಪುರದ ದಾಳಿಂಬ ಗ್ರಾಮದ ಕುಮಾರ್ ಮತ್ತು ಕನ್ಯಾ ಅವರ ಪುತ್ರಿಯಾಗಿದ್ದಾಳೆ. ಎಂದಿನಂತೆ ಆಕೆ ಬೆಳಗ್ಗೆ ೯.೧೫ರ ಸುಮಾರಿಗೆ ಸಹಪಾಠಿಗಳ ಜತೆ ಕಾಲೇಜಿಗೆ ಆಗಮಿಸಿದ್ದಳು.ಆಕೆ ಕಾಲೇಜಿನ ಆವರಣಕ್ಕೆ ಪ್ರವೇಶಿಸಿದ ತಕ್ಷಣವೇ ಇನ್ನೋವಾ ಕಾರು ಅಲ್ಲಿಗೆ ಬಂದಿದ್ದು ಅದರಲ್ಲಿದ್ದವರಲ್ಲಿ ಆರೋಪಿ ಚೇತನ್ ಕಾರಿನಿಂದ ಇಳಿದು ಸಂಜನಾಗೆ ಚಾಕುವಿನಿಂದ ಇರಿದಿದ್ದಾನೆ.
ಸಂಜನಾ ಚೂರಿ ಇರಿತಕ್ಕೆ ತತ್ತರಿಸಿ ಕೆಳಗೆ ಬೀಳುತ್ತಿದ್ದಂತೆಯೇ ಯುವಕ ಆಕೆಯನ್ನು ನೇರವಾಗಿ ಕಾರಿಗೆ ಎತ್ತಾಕಿಕೊಂಡಿದ್ದಾನೆ. ಕಾರು ಅಲ್ಲಿಂದ ಪರಾರಿಯಾಗಿದೆ.ಈ ನಡುವೆ ಚೂರಿ ಇರಿತ ಮತ್ತು ಅಪಹರಣದ ಘಟನೆಯಿಂದ ಕಾಲೇಜು ಆವರಣ ಬೆಚ್ಚಿ ಬಿದ್ದಿದೆ.
ಕಲ್ಲು ತೂರಾಟ:
ಸ್ಥಳದಲ್ಲಿದ್ದ ಕೆಲವರು ಕಾರಿನತ್ತ ಕಲ್ಲು ತೂರಿದ್ದಾರೆ. ಆದರೂ ದುಷ್ಕರ್ಮಿಗಳು ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ. ಕೂಡಲೇ ಕಾಲೇಜಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ನಡುವೆ ಭುಜ ಮತ್ತು ಕತ್ತಿನ ಭಾಗಕ್ಕೆ ಚೂರಿಯಿಂದ ಇರಿಯಲ್ಪಟ್ಟು ರಕ್ತ ಸ್ರಾವಕ್ಕೆ ಒಳಗಾದ ವಿದ್ಯಾರ್ಥಿನಿಯನ್ನು ಕಾರಿನಲ್ಲೇ ಎತ್ತಾಕಿಕೊಂಡು ಹೋದ ತಂಡ ಆಕೆಯನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ.
ಪಾಗಲ್ ಪ್ರೇಮಿ:
ಕೃತ್ಯ ನಡೆಸಿದ ಡಿ.ಎನ್. ಚೇತನ್ ಒಬ್ಬ ಪಾಗಲ್ ಪ್ರೇಮಿ ಎಂದು ತಿಳಿದುಬಂದಿದೆ. ಆತ ಕಾರು ಚಾಲಕನಾಗಿದ್ದು ಸಂಜನಾಳ ಹಿಂದೆ ಬಿದ್ದಿದ್ದಾನೆ. ಸಂಜನಾಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಆತ ಆಕೆ ಒಪ್ಪದೆ ಇದ್ದಾಗ ಈ ರೀತಿಯ ಕೃತ್ಯಕ್ಕೆ ಮುಂದಾಗಿದ್ದಾನೆ.
ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಸ್ಥಿತಿ ಗಂಭೀರವಾಗಿದೆ. ಎಸ್‌ಪಿ ಕಾರ್ತಿಕ್ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದ್ದಾರೆ. ರಾಮನಗರದ ಐಜೂರು ಠಾಣೆಯಲ್ಲಿ ಆರೋಪಿ ಚೇತನ್ ನನ್ನು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯನ್ನು ಖುದ್ದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ವಿಚಾರಣೆ ಮಾಡುತ್ತಿದ್ದಾರೆ.