ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು

ಸಂಜೆವಾಣಿ ವಾರ್ತೆ

ಶಿವಮೊಗ್ಗ. ಅ.೮; ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,)ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ. ಇವರು ಅಭಿಮತ ವ್ಯಕ್ತ ಪಡಿಸಿದರು. ಅವರು ಇಂದು “ವಿಶ್ವ ಶಿಕ್ಷಕರ ದಿನಾಚರಣೆ” ಅಂಗವಾಗಿ ಶಿವಮೊಗ್ಗ ರಾಜೇಂದ್ರನಗರದ ರೋಟರಿ ಪೂರ್ವ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಶಿಕ್ಷಕರು ಸಮಾಜದ ಆಸ್ತಿ, ಶಿಕ್ಷಕರಾಗಿರುವುದು ಇತರರ ಜೀವನದ ಮೇಲೆ ಪರಿವರ್ತಕ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರಲು ಅನನ್ಯ ಅವಕಾಶಗಳನ್ನು ಒದಗಿಸುತ್ತದೆ. ಸುಸ್ಥಿರ ಭವಿಷ್ಯವನ್ನು ರೂಪಿಸಲು ಮತ್ತು ವ್ಯಯಕ್ತಿಕ ನೆರವೇರಿಕೆಯನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಇಂದು ಶಿಕ್ಷಣ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಶಿಕ್ಷಕ ವೃತ್ತಿಯನ್ನು ನಾವು ಸದಾ ಗೌರವಿಸಬೇಕು ಎಂದು ಟ್ರಸ್ಟ್ ಖಜಾಂಚಿ ರೊ. ಜಿ. ವಿಜಯ್ ಕುಮಾರ್ ತಿಳಿಸಿದರು.ಇದೇ ಸಂದರ್ಭದಲ್ಲಿ ಜಂಟಿ ಕಾರ್ಯದರ್ಶಿಯಾದ ರೊ. ನಾಗವೇಣಿ ಎಸ್.ಆರ್., ಇವರು ಎಲ್ಲ ಶಿಕ್ಷಕರನ್ನು ಫಲಪುಷ್ಪ ನೀಡುವುದುರ ಮೂಲಕ ಸ್ವಾಗತಿಸಿ, ಶಿಕ್ಷಕರ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಪೂರ್ವ ಆಂಗ್ಲ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಸೂರ್ಯನಾರಾಯಣ್ ಆರ್ ಮತ್ತು ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.