
ಭಾಲ್ಕಿ:ನ.19: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ, ಆದ್ದರಿಂದ ಶಿಕ್ಷಕರು ಸದಾ ಕ್ರಿಯಾಶೀಲರಾಗಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಸಹದೇವ.ಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹ ಪಠ್ಯ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಎಲ್ಲಾ ಕ್ಷೇತ್ರಗಳಲ್ಲಿಯೂ ಪರಿಣಿತರಾಗಿದ್ದರೆ, ವಿದ್ಯಾರ್ಥಿಗಳನ್ನು ಉತ್ತಮ ರೀತಿಯಿಂದ ಅಭಿವೃದ್ದಿ ಪಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿವರ್ಷ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಶಿಕ್ಷಕರ ಸಹ ಪಠ್ಯ ಚಟುವಟಿಕೆ ಕಾರ್ಯಕ್ರಮ ಆಯೋಜಿಸಿ, ಶಿಕ್ಷಕರಲ್ಲಿಯ ಪ್ರತಿಭೆಯನ್ನು ಹೊರತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಸುಂಟೆ ಮಾತನಾಡಿ, ಶಿಕ್ಷಕರ ಪ್ರತಿಭೆ ಗುರುತಿಸಿಕೊಳ್ಳು ಸಹಪಠ್ಯ ಚಟುವಟಿಕೆ ಉತ್ತಮ ವೇದಿಕೆಯಾಗಿದೆ. ಪ್ರತಿಯೊಬ್ಬ ಶಿಕ್ಷಕರು ಇದರಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣ ಮಾಡಿಕೊಳ್ಳಬೇಕು ಎಂದು ಹೇಳಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತಾತ್ರಿ ಕಾಟಕರ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿರುವಂತೆ, ಶಿಕ್ಷಕರ ಪ್ರತಿಭೆ ಗುರುತಿಸಲು ಸಹಪಠ್ಯ ಚಟುವಟಿಕೆ ಉತ್ತಮ ವೇದಿಕೆ ಯಾಗಿದೆ. ಎಲ್ಲಾ ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಸ್ಥಳೀಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಿರಣಕುಮಾರ ಭಾಟಸಾಂಗವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಆರ್‍ಪಿ ಆನಂದ ಹಳೆಂಬರೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತಾಂಬೋಳೆ, ಬಸವಪ್ರಭು ಸೋಲಾಪೂರೆ, ಜಯರಾಜ ದಾಬಶೆಟ್ಟಿ, ಚಂದ್ರಕಾಂತ ತಳವಾಡೆ, ಶಿಕ್ಷಕಿ ಸಾಯಮ್ಮ ಉಪಸ್ಥಿತರಿದ್ದರು. ಟಿ.ಚಂದ್ರಕಾಂತ ಸ್ವಾಗತಿಸಿದರು. ಶಿಕ್ಷಕಿ ಶೋಭಾ ಮಾಸಿಮಾಡೆ ನಿರೂಪಿಸಿದರು. ಶಿವಕುಮಾರ ವಾಡಿಕರ ವಂದಿಸಿದರು.