
ತುಮಕೂರು, ಸೆ. ೨- ಮಕ್ಕಳು ಮಾದರಿ ಪ್ರಜೆಗಳಾಗಿ ರೂಪುಗೊಳ್ಳಲು ಅವರ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಕಾಳಜಿ, ವಿವೇಚನೆಯಿಂದ ಮಾರ್ಗದರ್ಶನ ನೀಡಬೇಕು. ಇಲಾಖೆಯ ಸಿಲೆಬಸ್ ಜತೆಗೆ ಮೌಲ್ಯಾಧಾರಿತ ಅಂಶಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಕರೆ ನೀಡಿದರು.
ನಗರದ ಬಿ.ಎ.ಗುಡಿ ಪಾಳ್ಯ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿ ರೂಪುಗೊಳ್ಳಲು ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಮಕ್ಕಳ ಸಹಜ ತಪ್ಪುಗಳನ್ನು ತಿದ್ದಿ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಅವರ ಭವಿಷ್ಯ ಉಜ್ವಲವಾಗಿ ಬೆಳೆಯಲು ಸಹಕರಿಸಬೇಕು ಎಂದರು.
ಬಿ.ಎ.ಗುಡಿ ಪಾಳ್ಯ ಶಾಲೆ ಇಂದಿಗೂ ತನ್ನ ಮಹತ್ವ ಉಳಿಸಿಕೊಂಡಿದೆ. ಇಲ್ಲಿ ಕಲಿತ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಪಡೆದಿದ್ದಾರೆ. ಶಾಲೆಯ ಈಗಿನ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಸಾಧನೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಹೊಂದಿರುವವರಿಗೆ ಈ ಶಾಲೆ ಉತ್ತರವಾಗಿ ಮಾದರಿ ಶಾಲೆಯಾಗಿ ಬೆಳವಣಿಗೆ ಕಾಣುತ್ತಿದೆ. ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದರು.
ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದವರು ಉನ್ನತ ಸ್ಥಾನಮಾನ ಪಡೆದಿದ್ದಾರೆ. ಆತ್ಮವಿಶ್ವಾಸ ಬೆಳೆಸುವ ಶಕ್ತಿ ಸರ್ಕಾರಿ ಶಾಲೆಗಳಿಗಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಅಸಕ್ತಿ ಬೆಳೆಸಿಕೊಂಡು ಶಿಕ್ಷಕರ ಮಾರ್ಗದರ್ಶನ ಪಡೆದು ಬದುಕು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಪಾಲಿಕೆ ಸದಸ್ಯ ಎಂ.ಶ್ರೀನಿವಾಸ್ ಮಾತನಾಡಿ, ಅತ್ಯುತ್ತಮ ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ಬಹುಮಾನ ವಿತರಿಸಿದರು. ವಿದ್ಯೆಯು ಸ್ವಾವಲಂಬನೆ, ಸ್ವಾಭಿಮಾನ ರೂಪಿಸುತ್ತದೆ. ಉತ್ತಮ ಬದುಕು ಕಟ್ಟಿಕೊಳ್ಳಲು ಆಸರೆಯಾಗುತ್ತದೆ. ಶಿಕ್ಷಣದ ಮಹತ್ವ ತಿಳಿದು ಮಕ್ಕಳು ಶ್ರದ್ಧೆಯಿಂದ ಕಲಿಯಿರಿ ಎಂದು ಕಿವಿ ಮಾತು ಹೇಳಿದರು.
ತಾವು ಓದಿದ ಈ ಶಾಲೆಯ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ತಾವು ಬಹುಮಾನ ನೀಡುವುದಾಗಿ ಹೇಳಿದ ಅವರು, ಉತ್ತಮ ಅಂಕ ಪಡೆಯುವ ಮಕ್ಕಳಿಗೆ ಶಾಲೆಯ ಶಿಕ್ಷಕರೂ ಸಹ ಸ್ವಂತ ಹಣದ ನೆರವು ನೀಡಿ ಪ್ರೋತ್ಸಾಹಿಸುತ್ತಿರುವುದು ಮಾದರಿ ಕಾರ್ಯ ಎಂದರು.
ಮಕ್ಕಳಲ್ಲಿನ ಪ್ರತಿಭೆ ಹೊರಬರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಮಕ್ಕಳು ಈ ಮೂಲಕ ತಮ್ಮ ಪ್ರತಿಭೆ ಮೆರೆಯಬೇಕು ಎಂದು ಹೇಳಿದರು.
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಅನುಸೂಯ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಅವರ ಮುಂದಿನ ಶಿಕ್ಷಣಕ್ಕೆ ತೊಡಕಾಗಬಾರದು, ಉನ್ನತ ಶಿಕ್ಷಣ ಪಡೆಯಬೇಕು. ಅದಕ್ಕಾಗಿ ತಮ್ಮ ಸಂಘದಿಂದ ಸಹಾಯ ನೀಡುವುದಾಗಿ ತಿಳಿಸಿದರು.
ಅತ್ಯುತ್ತಮ ಅಂಕ ಪಡೆದ ಹಾಗೂ ವಿಷಯವಾರು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯಾ ವಿಷಯದ ಶಿಕ್ಷಕರು ಪ್ರೋತ್ಸಾಹ ಧನ ವಿತರಿಸಿದರು. ವರ್ಗಾವಣೆಯಾದ ಶಿಕ್ಷಕರನ್ನು ಬೀಳ್ಕೊಡಲಾಯಿತು. ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭಾ ಕಾರಂಜಿಯಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ನೀಡಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಸಿ.ಆರ್.ಪಿ ನಾಗೇಂದ್ರ ಪ್ರಸಾದ್, ಕ್ಷೇತ್ರ ಸಮನ್ವಯಾಧಿಕಾರಿ ಗಾಯತ್ರಿ, ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ, ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿದ್ಧಲಿಂಗಸ್ವಾಮಿ, ಚೆನ್ಮಬಸವಣ್ಣ, ದೇವರಾಜು ಮತ್ತಿತರರು ಭಾಗವಹಿಸಿದ್ದರು.