ವಿದ್ಯಾರ್ಥಿಗಳ ಸಂಶೋಧನೆಗೆ ಹೊಸ ದೃಷ್ಟಿಕೋನ ಒದಗಿಸಬೇಕು ; ಡಾ: ಸುರಪುರ

ಧಾರವಾಡ, ನ 21- ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸಂಶೋಧನೆಗೆ ಹೊಸ ದೃಷ್ಟಿಕೋನ ಕಂಡುಕೊಳ್ಳಬೇಕು. ಬುಡಕಟ್ಟು ಸಮುದಾಯಗಳು, ಪರಿಸರ ಹಾಗೂ ಸಾಮಾಜಿಕ, ಸಾಂಸ್ಕøತಿಕ ಅಧ್ಯಯನದ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ರವಿಕುಮಾರ್ ಸುರಪುರ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಜರುಗಿದ  ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜನಿಗೆ ಅಥವಾ ದೊರೆಗೆ ತನ್ನ ನಾಡಿನಲ್ಲಿ ಮಾತ್ರ ಗೌರವ ದೊರೆತರೆ, ಜ್ಞಾನಿಯಾದವನಿಗೆ ಎಲ್ಲೆಡೆ ಗೌರವ ಸಿಗುತ್ತದೆ. ಭಾರತದ ಮೊಟ್ಟಮೊದಲ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಬೇಡ ಸಮುದಾಯದ ಬುಡಕಟ್ಟಿಗೆ ಸೇರಿದ್ದರೂ ಕೂಡಾ ಆತ ತನ್ನ ಪ್ರತಿಭೆಯ ಮೂಲಕ ಜಗತ್ತಿನ ಗೌರವಕ್ಕೆ ಪಾತ್ರನಾಗಿದ್ದಾನೆ.  ರಾಮಾಯಣ ಮಹಾಕಾವ್ಯ ನಮ್ಮ ದೇಶದ ನಾಗರಿಕತೆ ವಿಕಸನಗೊಳ್ಳಲು ನೈತಿಕ ಮೌಲ್ಯಗಳು ದೇಶದಲ್ಲಿ ಅಳವಡಿಕೆಯಾಗಲು ಕಾರಣವಾಗಿದೆ. ವಿಜ್ಞಾನ ದೃಷ್ಟಿಯಿಂದ ನೋಡಿದಾಗ ಮನುಷ್ಯಕುಲ ಬೆಳವಣಿಗೆ ಹೊಂದಿರುವುದೇ ಬೇಟೆಗಾರಿಕೆಯ ವೃತ್ತಿಯ ಮೂಲದಿಂದ ಎಂಬುದು ಸಾಬೀತಾಗಿದೆ. ಬೇಟೆಗಾರಿಕೆಯಿಂದಲೇ ಮಾನವ ಜನಾಂಗ ವಿಕಸನ ಹೊಂದಿ ಕಾಲಾಂತರದಲ್ಲಿ ವಿವಿಧ ವೃತ್ತಿಗಳನ್ನು ಆಧರಿಸಿ ಸಾಮಾಜಿಕ ವ್ಯವಸ್ಥೆ ರೂಪುಗೊಂಡಿದೆ ಎಂದರು. 

ಜಯಂತಿ ಆಚರಣೆಗಳ ಸಂದರ್ಭದಲ್ಲಿ ತಜ್ಞರು, ಚಿಂತಕರು ಒಂದೆಡೆ ಸೇರುವುದರಿಂದ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತ್ತದೆ.  ವಾಲ್ಮೀಕಿ ಮಹರ್ಷಿ ಬಗ್ಗೆ ಮಾತನಾಡುವಾಗ ರಾಮಾಯಣದ ಕುರಿತು ಉಲ್ಲೇಖಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವುದೇ ದುರಂತವಾದರೂ ಕೂಡಾ ಆತ ದು:ಖಿತನಾಗದೇ, ವಿಚಲಿತನಾಗದೇ, ಸಿಟ್ಟಿಗೀಡಾಗದೆ ಸಂಯಮದಿಂದ ವರ್ತಿಸಿ ತನ್ನ ಬದುಕಿನ ಆಶಯಗಳನ್ನು ಕಳೆದುಕೊಳ್ಳದೇ ಗಟ್ಟಿಯಾಗಿ ನಿಂತು ಆದರ್ಶ ಬದುಕನ್ನು ಸಾಗಿಸುವ ನೀತಿ ರಾಮನ ಜೀವನದಿಂದ ಅರಿಯಬೇಕು. ವರ್ತಮಾನದಲ್ಲಿ ಜಾಗತಿಕವಾಗಿ ಆತ್ಮಹತ್ಯೆಗಳ ಸಂಖ್ಯೆ ಏರುತ್ತಿರುವ ಸಂದರ್ಭದಲ್ಲಿ ರಾಮನ ಬದುಕಿನಿಂದ ನಾವು ಸಂಯಮ, ಸ್ಥಿರತೆಯ ಪಾಠಗಳನ್ನು ಕಲಿಯಬೇಕು. ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. 

ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಪ್ರತಿಭೆ ಆಧರಿಸಿ ಅವಕಾಶಗಳನ್ನು ನೀಡಬೇಕು. ಆತನ ಸಾಮಾಜಿಕ, ಆರ್ಥಿಕ ಹಿನ್ನೆಲೆ, ವ್ಯಕ್ತಿಯ ವಿಕಸನಕ್ಕೆ ಮಾರಕವಾಗಬಾರದು ಎಂದು ಡಾ: ರವಿಕುಮಾರ ಸುರಪುರ ಹೇಳಿದರು. 

ಅಬಕಾರಿ ಉಪ ಆಯುಕ್ತ ಶಿವನಗೌಡ ಪಾಟೀಲ ಮಾತನಾಡಿ, ಯಾವುದೇ ವಿಶೇಷ ತರಬೇತಿ ಇಲ್ಲದೇ ಸತತ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಐಎಎಸ್ ಪಾಸಾಗಬಹುದು ಎಂದು ಸಾಬೀತುಪಡಿಸಿದವರ ಸಾಲಿನಲ್ಲಿ ಡಾ: ರವಿ ಸುರಪುರ ಹಾಗೂ ಡಾ: ಆರ್.ವಿಶಾಲ್ ಅವರು ಸೇರುತ್ತಾರೆ. ಪ್ರತಿಭಾವಂತರಾಗಿರುವ ಡಾ: ರವಿ ಸುರಪುರ ಅವರು ವಿದ್ಯಾರ್ಥಿ ದೆಸೆಯಿಂದಲೂ ಮೀಸಲಾತಿಯನ್ನು ನಿರಾಕರಿಸಿ ಸಾಮಾನ್ಯ ವರ್ಗದಲ್ಲಿಯೇ ಎಂಬಿಬಿಎಸ್ ಪೂರೈಸಿ ಐಎಎಸ್ ಉತ್ತೀರ್ಣರಾಗಿದ್ದಾರೆ. ಅರ್ಜಿ ತುಂಬುವಾಗಲೇ ಅವರು ಮೀಸಲಾತಿಯನ್ನು ಕೋರುತ್ತಿರಲಿಲ್ಲ. ಇಂತಹ ವ್ಯಕ್ತಿಗಳನ್ನು ವಿದ್ಯಾರ್ಥಿಗಳು ಮಾದರಿಯಾಗಿಟ್ಟುಕೊಂಡು ಅಧ್ಯಯನ ಮಾಡಬೇಕು ಎಂದರು.

ಗೋಕಾಕದ ನಿವೃತ್ತ ಪ್ರಾಧ್ಯಾಪಕ ಡಾ: ಅರ್ಜುನ ಪಂಗಣ್ಣವರ ಅವರು ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಅವರು ರಚಿಸಿದ ಮಹರ್ಷಿ ವಾಲ್ಮಿಕಿ ಬದುಕು ಮತ್ತು ಕೃತಿಗಳು ಎಂಬ ಗ್ರಂಥ ಬಿಡುಗಡೆ ಮಾಡಲಾಯಿತು. ಕುಲಪತಿ ಡಾ: ಕೆ.ಬಿ. ಗುಡಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕುಲಸಚಿವ ಡಾ: ಕೆ.ಟಿ. ಹನುಮಂತಪ್ಪ, ಮೌಲ್ಯಮಾಪನ ಕುಲಸಚಿವ ಡಾ: ರವೀಂದ್ರ ಕದಂ, ಹಣಕಾಸು ಅಧಿಕಾರಿ ಡಾ: ಆರ್.ಆರ್. ಬಿರಾದಾರ, ಉಪಕುಲಸಚಿವೆ ಎನ್.ಆರ್. ಸಾಧನಿ, ವಾಲ್ಮೀಕಿ ಜಯಂತಿ ಸಂಯೋಜಕ ಡಾ: ಜಿ.ಎಸ್. ವೇಣುಮಾಧವ, ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ: ಡಿ.ಬಿ. ಕರಡೋಣಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.