ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮನವಿ

ದಾವಣಗೆರೆ.ಜ.೧೦: ನಗರದ ಹೊರವಲಯದಲ್ಲಿ ಇರುವ ಹಳೇ ಕುಂದವಾಡ ಗ್ರಾಮದಲ್ಲಿರುವ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಹೆಚ್.ಎಸ್.ದೊಡ್ಡೇಶ್ ಸ್ನೇಹ ಬಳಗವು ಹಳೇ ಕುಂದವಾಡ ಗ್ರಾಮದ ಸಮೀಪ ಇರುವ ಬಾಲಕರ ವಿದ್ಯಾರ್ಥಿ ನಿಲಯದ ಬಳಿ ಪ್ರತಿಭಟನೆ ನಡೆಸಿತು.ಈ ವೇಳೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹೆಚ್.ಎಸ್.ದೊಡ್ಡೇಶ್, ಹಳೇ ಕುಂದವಾಡ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದಾವಣಗೆರೆ ನಗರ ವ್ಯಾಪ್ತಿಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ಮತ್ತು ಮೆಟ್ರಿಕ್ ನಂತರ ವೃತ್ತಿಪರ ಬಾಲಕರ ವಿದ್ಯಾರ್ಥಿನಿಲಯಗಳಿದ್ದು, ಈ ಎರಡು ವಿದ್ಯಾರ್ಥಿ ನಿಲಯಗಳು ಸ್ವಂತ ಕಟ್ಟಡ  ಹೊಂದಿವೆ.ಈ ವಿದ್ಯಾರ್ಥಿನಿಲಯದಲ್ಲಿ 12 ಜನ ಸಿಬ್ಬಂದಿಗಳು ಹಾಗೂ 300 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ವಾಸವಿದ್ದು, ಇಲ್ಲಿನ ವಿದ್ಯಾರ್ಥಿಗಳು ನಗರಕ್ಕೆ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದಾವಣಗೆರೆ ನಗರಕ್ಕೆ ಬರಬೇಕೆಂದರೆ 6 ಕಿ.ಮೀ ದೂರ ಆಗುತ್ತದೆ. ಆದರೆ, ಈ ವಿದ್ಯಾರ್ಥಿ ನಿಲಯದಿಂದ ವಿದ್ಯಾರ್ಥಿಗಳಿಗೆ ಓಡಾಡಲು ಯಾವುದೇ ವಾಹನಗಳ ವ್ಯವಸ್ಥೆ ಇರುವುದಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಪ್ರತಿನಿತ್ಯ ಕಾಲೇಜುಗಳಿಗೆ ಬರಲು ತೊಂದರೆ ಅಗುತ್ತಿದೆ ಎಂದು ಹೇಳಿದರು.ಕಾರಣ ಕಾಲೇಜಿನ ಸಮಯಕ್ಕೆ ಸರಿಯಾಗಿ ನಗರ ಸಾರಿಗೆ ಬಸ್ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಹಲವಾರು ಮನವಿ ಸಲ್ಲಿಸಿದ್ದರೂ ಈವರೆಗೂ ಯಾವುದೇ ಸೌಲಭ್ಯವನ್ನು ಕಲ್ಪಿಸಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನ ಸೌಲಭ್ಯ ಒದಗಿಸದೇ ವಿಳಂಬ ಧೋರಣೆ ಅನುಸರಿಸುತ್ತಿರುವ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳ ನೀತಿ ಖಂಡನೀಯ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ನಗರ ಸಾರಿಗೆ ವ್ಯವಸ್ಥೆ ಒದಗಿಸಬೇಕೆಂದು ಆಗ್ರಹಿಸಿದರು.ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಶೀಲಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಒಂದು ವೇಳೆ ಈ ಹೋರಾಟದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿ, ಯಾರಿಗಾದರೂ ತೊಂದರೆ ಅನುಭವಿಸಿದಲ್ಲಿ ಸರ್ಕಾರವೇ ನೇರ ಹೊಣೆಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಮಾಜಿ ಮೇಯರ್ ಬಿ.ಜೆ ಅಜಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ಪ್ರತಿಭಟನೆಯಲ್ಲಿ ಎನ್.ಅನಿಲ್, ಶೇರ್ ಅಲಿ, ಸೈಯದ್ ಮಲ್ಲಿಕ್, ಚೇತನ್ ಕುಮಾರ್, ಎಂ.ದರ್ಶನ್, ಮಂಜು, ನಿಖಿಲ್, ಶಂಕರ್ ಇತರರು ಇದ್ದರು.