ನ್ಯೂಯಾರ್ಕ್, ಎ.೧೭- ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದಲ್ಲಿ ಎರಡು ದಿನಗಳ ಅಂತರದಲ್ಲಿ ಆರು ಮಂದಿ ಮಹಿಳಾ ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದ ಆಘಾತಕಾರಿ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನ್‌ವಿಲ್ಲೆ ಮೂಲದ ಎಲ್ಲೆನ್ ಶೆಲ್ (೩೮), ಅರ್ಕಾನ್‌ಸಾಸ್‌ನ ಹೇದರ್ ಹಾರೆ (೩೨), ಒಕ್ಲಾಹೋಮಾದ ಎಮಿಲಿ ಹ್ಯಾನ್‌ಕೂಕ್ (೨೬), ಡೆಸ್ ಮೊಯಿನೆಸ್ ಲೋವಾದ ಕ್ರಿಸ್ಟೆನ್ ಗ್ಯಾನ್ಟ್ (೩೬), ನ್ಯೂಯಾರ್ಕ್‌ನ ಹೆನ್ನಾಹ್ ಮಾರ್ತ್ (೨೬), ಅಲ್ಲೀಹ್ ಖೇರದ್ಮಂಡ್ (೩೩) ಸೇರಿದಂತೆ ಆರು ಮಂದಿ ಮಹಿಳಾ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಶೆಲ್ ವಿರುದ್ಧ ಮೂರನೇ ಹಂತದ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈಕೆ ೧೬ ವಯಸ್ಸಿನ ಇಬ್ಬರು ಬಾಲಕರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಶೆಲ್ ಅವರನ್ನು ಗ್ಯಾರಾರ್ಡ್ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹಾರೆ ಎಂಬ ಶಿಕ್ಷಕಿಯು ಹರೆಯದ ಬಾಲಕನ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಪ್ರಥಮ ಹಂತದ ಪ್ರಕರಣದಡಿ ಕೇಸ್ ದಾಖಲಿಸಲಾಗಿದೆ. ಇನ್ನು ಹ್ಯಾನ್‌ಕೂಕ್ ಎಂಬಾಕೆ ೧೫ರ ಹರೆಯದ ಬಾಲಕನ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕನ ಜೊತೆ ಈಕೆ ಸ್ನ್ಯಾಪ್‌ಚಾಪ್‌ನಲ್ಲೂ ಸಂಭಾಷಣೆ ನಡೆಸಿದ್ದು, ಅಲ್ಲದೆ ಲೈಂಗಿಕ ದೌರ್ಜನ್ಯ ಕೂಡ ನಡೆಸಿದ್ದಳು ಎನ್ನಲಾಗಿದೆ. ಅತ್ತ ಕ್ರಿಸ್ಟೆನ್ ಗ್ಯಾನ್ಟ್ ಎಂಬಾಕೆ ಬಾಲಕನ ಜೊತೆ ಶಾಲೆ ಹಾಗೂ ಹೊರಗಡೆ ಐದು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಳು ಎನ್ನಲಾಗಿದೆ. ಇನ್ನು ಖೇರದ್ಮಂಡ್ ಎಂಬಾಕೆ ಬಾಲಕನ ಜೊತೆ ಕಳೆದ ಹಲವು ತಿಂಗಳುಗಳಿಂದ ದೌರ್ಜನ್ಯ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ.