ವಿದ್ಯಾರ್ಥಿಗಳ ಭಾಗವಹಿಸುವಿಕೆ ಉತ್ತಮ ಬೆಳವಣಿಗೆ: ಡಾ. ಜೆ. ನಾರಾಯಣ

ಕಲಬುರಗಿ: ಡಿ.3:ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ದೃಷ್ಟಿಕೋನದ ವಾಸ್ತವಿಕ ಮತ್ತು ಆಯಾಮಗಳು ವ್ಯಕ್ತವಾಗಿವೆ. ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಉದ್ದೇಶ ಸಾರ್ಥಕಗೊಂಡಿದೆ. ಎಂದು ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಡಾ. ಜೆ. ನಾರಾಯಣ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಡಾರ್ವಿನ್ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಸಮ್ಮೇಳನಗಳಿಂದ ವಿದ್ಯಾರ್ಥಿ ಸಮೂಹದ ಜ್ಞಾನದ ಮಟ್ಟ ಹೆಚ್ಚುವುದರ ಜೊತೆಗೆ ಸಂಶೋಧನೆ ಕ್ಷೇತ್ರದಲ್ಲಿ ತೊಡಗಲು ಆಸಕ್ತಿ ಹಾಗೂ ಪ್ರೇರಣೆ ದೊರೆಯಲಿದೆ. ಸಮ್ಮೇಳನಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಸಂಶೋಧನೆಯ ಮಹತ್ವ ಮತ್ತು ಅದರ ಮೌಲ್ಯ ಅರ್ಥವಾಗುತ್ತದೆ ಎಂದರು.
ಸಮ್ಮೇಳನ ಮತ್ತು ವಿಚಾರ ಸಂಕಿರಣಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಉತ್ತೇಜಿಸಿ ಆತ್ಮವಿಶ್ವಾಸವನ್ನು ಬೆಳೆಸುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ. ಇಂತಹ ವೇದಿಕೆಗಳು ವಿದ್ಯಾರ್ಥಿಗಳ ಮೌಲ್ಯಯುತ ಸಾಧನೆಗೆ ಸ್ಪೂರ್ತಿಯಾಗಲಿದೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ ಅವರು ಮಂಡನೆಯಾದ ಮೌಲ್ಯಯುತ ಸಂಶೋಧನ ಪ್ರಬಂಧಗಳು ಸುಸ್ಥಿರ ಬೆಳವಣಿಗೆಗೆ ಪೂರಕವಾಗಿದ್ದು ಸಮಾಜದ ಅಬ್ಯುದಯಕ್ಕೆ ಉಪಯುಕ್ತವಾಗಿವೆ.
ಗುಲಬರ್ಗಾ ವಿಶ್ವವಿದ್ಯಾಲಯದ ಬೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ವಿ.ಎನ್. ಜಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಜರುಗಿತು. ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸುವುದು ಅತ್ಯಂತ ಪ್ರಮುಖವಾಗಿದೆ. ಇದರಿಂದ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯಾಗುತ್ತದೆ. ಸ್ವತಂತ್ರ ಆಲೋಚನಾ ಶಕ್ತಿ ಬೆಳೆಯುವಲ್ಲಿ ಅತ್ಯಂತ ಸಹಕಾರಿಯಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ವೃತ್ತಿ ಕೌಶಲ್ಯವಿಲ್ಲದೆ ಕೇವಲ ಪದವಿಯಿಂದ ಭವಿಷ್ಯ ನಿರ್ಮಾಣ ಅಸಾಧ್ಯವಾಗಿದೆ. ಆದರಿಂದ ಕೌಶಲ್ಯ ಸಹಿತ ವಿದ್ಯಾರ್ಜನೆಗೆ ನಾವೆಲ್ಲ ಇಂದು ಪ್ರಾಮುಖ್ಯತೆ ಕೊಡಬೇಕಾಗಿದೆ. ವಿಜ್ಞಾನದ ಅಭಿವೃದ್ಧಿಯಿಂದ ತಂತ್ರಜ್ಞಾನ ಬೆಳೆಯುತ್ತಿದೆ ಆದರಿಂದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಶ್ರಮವಹಿಸಿ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಸಮ್ಮೇಳನದಲ್ಲಿ ಭಾಗವಹಿಸಿ ಉತ್ತಮ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್. ಬಸವರಾಜಪ್ಪ, ಡಾ. ಇನಾಯತ್ತುಲ್ಲಾ ನಯಾಸುದ್ದಿನ್ ಉಪಸ್ಥಿತರಿದ್ದರು. ಡಾ. ಶಹಾನ ಬಾನು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಾದ ಶ್ರೇಯ ಮತ್ತು ವಿದ್ಯಾ ಪ್ರಾರ್ಥನೆ ಗೀತೆ ಹಾಡಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ. ವಿಜಯ್ ಕುಮಾರ್ ವಂದಿಸಿದರು.