ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗುರುಗಳ ಪಾತ್ರ ಮಹತ್ತರ

ತುಮಕೂರು, ಆ. ೧- ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಲು ಗುರುಗಳ ಪಾತ್ರ ಅತ್ಯುತ್ತಮವಾಗಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ಹೇಳಿದರು.
ಒಬ್ಬ ಗುರು ಮನಸ್ಸು ಮಾಡಿದರೆ ಏನೆಲ್ಲ ಒಳ್ಳೆಯ ಕೆಲಸವನ್ನು ಮಾಡಬಹುದು. ಗುರು ಶಿಷ್ಯರ ಬಗ್ಗೆ ಗೌರವಿರಬೇಕು, ಗುರು ಶಿಷ್ಯರ ಬಗ್ಗೆ ಪೂಜ್ಯ ಭಾವನೆ ಹೊಂದಿರಬೇಕು. ಗುರುಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಬೇಕು. ಮಕ್ಕಳು ಮತ್ತು ದೇಶದ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು ಎಂದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಅಂತಿಮ ವರ್ಷ (೨೦೨೦ನೇ ಬ್ಯಾಂಚ್‌ನ) ವೈದ್ಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಒಂದೊಂದು ಹಂತದಲ್ಲಿ ಒಬ್ಬೊಬ್ಬ ಗುರುಗಳು ದಾರಿ ತೋರಿರುತ್ತಾರೆ. ಅಂತಹ ಗುರುಗಳನ್ನು ವಿದ್ಯಾರ್ಥಿಗಳು ಮರೆಯಬಾರದು. ನಮ್ಮ ದೇಶದಲ್ಲಿ ಹತ್ತು ಹಲವು ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸುತ್ತಾ ಬಂದಿದ್ದೇವೆ. ಇದರಲ್ಲಿ ಮುಖ್ಯವಾಗಿ ಗುರುವನ್ನು ನೆನಪಿಸಿಕೊಳ್ಳುವುದು ಒಂದು ಸಂಪ್ರದಾಯವಾಗಿದೆ. ಈ ದೃಷ್ಟಿಯಲ್ಲಿ ತಾಯಿಯೇ ಮೊದಲ ಗುರು ಎಂದರು.
ಪ್ರಾಥಮಿಕ ಶಿಕ್ಷಣದಿಂದ ಇಲ್ಲಿಯವರೆಗೆ ನಿಮ್ಮ ಜೀವನದಲ್ಲಿ ಬಂದಿರುವ ಗುರುಗಳು ನಿಮ್ಮ ಏಳ್ಗೆಯನ್ನೇ ಬಯಸುತ್ತಾರೆ. ಆದ್ದರಿಂದ ಗುರುವಿನ ಅನುಕಂಪ ಮತ್ತು ಗುರುವಿನ ಮಾರ್ಗದರ್ಶನವಿದ್ದರೆ ಗುರಿ ತಲುಪುವುದು ಕಷ್ಟವಲ್ಲ ಎಂದರು.
ಇದೇ ಸಂದರ್ಭದಲ್ಲಿ ವೈದ್ಯ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ. ರಮಣ್ ಎಂ. ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಲ್. ಹರೇಂದ್ರಕುಮಾರ್, ಉಪಪ್ರಾಂಶುಪಾಲರಾದ ಡಾ. ರೇಖಾ ಗುರುಮೂರ್ತಿ, ಶ್ರೀದೇವಿ ಆಸ್ಪತ್ರೆಯ ನೇತ್ರತಜ್ಞರಾದ ಡಾ. ಲಾವಣ್ಯ, ಆಡಳಿತಾಧಿಕಾರಿ ಪ್ರೊ.ಟಿ.ವಿ. ಬ್ರಹ್ಮದೇವಯ್ಯ, ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಸಿ. ಕೃಷ್ಣ, ಡಾ. ಸತೀಶ್, ಡಾ. ಅನುಪಮ ಮತ್ತಿತರರು ಭಾಗವಹಿಸಿದ್ದರು.