ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಚಿಂತನೆ ಅಗತ್ಯ

ಧಾರವಾಡ,ಜು16: ಇಂದಿನ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಸ್ಪರ್ಧಿಸಲು ಶಾಲಾ ವಿದ್ಯಾರ್ಥಿಗಳಲ್ಲಿ ಕಲಿವಿನಫಲ ಸಂವರ್ಧನೆ ವ್ಯಾಪಕಗೊಳ್ಳಬೇಕಾಗಿದ್ದು, ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ನಿರಂತರ ಕಾಳಜಿ ಮತ್ತು ಚಿಂತನೆ ನಡೆಸುವುದು ಅತೀ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಅವರು ನಗರದ ಶ್ರೀಮತಿ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗಾಗಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಹಾಗೂ ವೇದ ಗಣಿತದ ವಿಷಯಗಳ ಬೋಧನೆಗೆ ಪೂರಕವಾಗಿ ತಮ್ಮ ಕಚೇರಿಗೆ ಆಗಮಿಸಿದ್ದ ಶಾಲೆಯ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿ ಮಾತನಾಡುತ್ತಿದ್ದರು.
ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಕೃತಕ ಬುದ್ಧಿಮತ್ತೆ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಹಾಗೂ ವೇದ ಗಣಿತಗಳಂತಹ ವಿಷಯಗಳನ್ನು ಸಾಂಪ್ರದಾಯಿಕ ಶಿಕ್ಷಣದೊಡನೆ ಪ್ರತಿಯೊಂದು ಶಾಲೆಗಳಲ್ಲಿ ಬೋಧಿಸಲ್ಪಡಬೇಕು ಎಂದೂ ಗುರುದತ್ತ ಹೆಗಡೆ ಸಲಹೆ ನೀಡಿದರು. ಚರಂತಿಮಠ ಪಬ್ಲಿಕ್ ಶಾಲೆ ಕೊಡಮಾಡಿದ ಕಲಿಕಾ ಉಪಕರಣ ಹಾಗೂ ನಿರ್ದಿಷ್ಟ ಪಠ್ಯಪುಸ್ತಕಗಳನ್ನು ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಿಗೆ ವಿತರಿಸಿ ಶುಭ ಹಾರೈಸಿದರು.
ಶಾಲೆಯ ಸಂಸ್ಥಾಪಕ ಹಿರಿಯ ನ್ಯಾಯವಾದಿ ಅರುಣ ಚರಂತಿಮಠ ಮಾತನಾಡಿ, ವಿದ್ಯಾರ್ಥಿಗಳ ಸಂಪೂರ್ಣ ಭೌದ್ಧಿಕ ಬೆಳವಣಿಗೆಗಾಗಿ ಹಾಗೂ ಅವರ ಮುಂದಿನ ಸುಂದರ ಭವಿಷ್ಯತ್ತಿಗಾಗಿ ಚರಂತಿಮಠ ಪಬ್ಲಿಕ್ ಶಾಲೆಯು ನಿರಂತರ ಹೊಸತನದೊಂದಿಗೆ ಶ್ರಮಿಸುತ್ತಿದ್ದು, ಹೊಸ ಹೊಸ ವಿದ್ಯಾವಿಕಾಸದ ಚಟುವಟಿಕೆಗಳನ್ನು ಅಳವಡಿಸಲಾಗುತ್ತಿದೆ ಎಂದರು.
ವೇದಗಣಿತ ಸಂಸ್ಥೆಯ ಮುಖ್ಯಸ್ಥ ಗುರುರಾಜ, ಶಿಕ್ಷಣ ತಜ್ಞೆ ಎಲಿಜಬೆತ್, ಸುಧಾ ಅರಕೇರಿ, ಶಾಲಾ ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ಹಾಗೂ ಶಾಲಾ ಶಿಕ್ಷಕರು ಇದ್ದರು.