
ರಾಯಚೂರು,ಮಾ.೦೯-ಮಮತೆಯ ಮಡಿಲಾಗಿ ಕರ್ತವ್ಯದ ಕಣಜವಾಗಿ ಮಹಿಳೆಯ ಸಾಧನೆ ಅವಿಸ್ಮರಣೀಯ ಎಂದು ಅನ್ನಪೂರ್ಣ ಮೇಟಿ ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ಸುಗುಣ ಶಿಕ್ಷಣ ಸಂಸ್ಥೆ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ೧೦ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷ ಉಪನ್ಯಾಸಕರಾಗಿ ತಮ್ಮ ಮಾತುಗಳನ್ನು ಹಂಚಿಕೊಂಡರು.
ಇತಿಹಾಸದ ಪುಟಗಳನ್ನು ತಿರುವಿದಾಗ ಮಹಿಳಾ ಸ್ವಾತಂತ್ರ್ಯವನ್ನು ಸ್ಮರಿಸುತ್ತ ೧೨ನೇ ಶತಮಾನ ಮುಕ್ತ ಸ್ವಾತಂತ್ರದ ಕಾಲವೆಂದೆ ಹೇಳಬೇಕು ಸಮಾಜದ ಪ್ರತಿಯೊಂದು ವರ್ಗದ ಮಹಿಳೆಯರು ಕುಟುಂಬದ ಜೊತೆಗೆ ಕಾಯಕದಲ್ಲಿಯೂ ಸಾರ್ಥಕವನ್ನು ಕಂಡವರು. ಇದಕ್ಕೆ ವಚನ ಸಾಹಿತ್ಯವೇ ಸಾಕ್ಷಿ. ಆಧುನಿಕ ಜೀವನಶೈಲಿಯಿಂದ ನೈತಿಕ ಮೌಲ್ಯಗಳು ಕುಸಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ಗರ್ಭ ಸಂಸ್ಕಾರ ಮಾಡುವ ಮೂಲಕ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತಬೇಕೆಂದು ಭಾರತೀಯ ಸಂಸ್ಕೃತಿಯನ್ನು ತಿಳಿಸಿದರು.
ಕದಳಿ ವೇದಿಕೆಯ ಅಧ್ಯಕ್ಷರಾದ ಲಲಿತಾ ಎಂ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವಚನ ಸಾಹಿತ್ಯ ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ ಎಂದರು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಎಲೆಮರೆ ಕಾಯಿಯಂತಿರುವ ನಮ್ಮ ರಾಯಚೂರಿನ ಸಾಧಕೀಯರನ್ನು ಗುರುತಿಸಿ ಕದಳಿ ಶ್ರೀ ೨೦೨೩ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಾದ ಈರಮ್ಮ ಇವರು ಸ್ತ್ರೀಶಕ್ತಿ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಬಯಲು ಶೌಚ ಮುಕ್ತ ಗ್ರಾಮ ನಿರ್ಮಾಣ ಕಾರ್ಯಕ್ಕೆ ತಲ್ಮಾರಿ, ಮಲ್ಕಾಪುರ ಇನ್ನಿತರ ಗ್ರಾಮಗಳಲ್ಲಿ ಸುಮಾರು ೩೦೦೦ ಶೌಚಾಲಯಗಳು ತಮ್ಮ ಸ್ವಂತ ಹಣದಲ್ಲಿ ನಿರ್ಮಿಸಿರುವುದು. ನಿಜಕ್ಕೂ ಮಾದರಿಯಾಗಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಂದಲೂ ಪ್ರಶಸ್ತಿಗಳು ಸಂದಿವೆ.
ಇವರ ಸಮಾಜಮುಖಿ ಕೆಲಸವನ್ನು ಗುರುತಿಸಿ ಕದಳಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುಟ್ಟಮ್ಮ ಇವರು ಅಂಗನವಾಡಿ ಶಿಕ್ಷಕಿಯಾಗಿ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಅಂಗನವಾಡಿ ಕೇಂದ್ರದಲ್ಲಿರುವ ಎಲ್ಲಾ ಮಕ್ಕಳಿಗೆ ತಮ್ಮ ಸ್ವಂತ ಹಣದಲ್ಲಿ ಎರಡು ಜೊತೆ ಸಮವಸ್ತ್ರ ಹಾಗೂ ಇನ್ನಿತರ ಪಾಠದ ಸಲಕರಣೆಗಳನ್ನು ನೀಡುವ ಮೂಲಕ ಉದಾರತೆ ಮರೆದಿದ್ದಾರೆ. ಮತ್ತೊರ್ವ ಪ್ರಶಸ್ತಿ ಪುರಸ್ಕೃತರಾದ ಸಯ್ಯದಾ ಪರ್ವಿನ್ ಬೇಗಂ ಇವರು ನಗರದ ಬಾಲಂಕು ಆಸ್ಪತ್ರೆಯ ನರ್ಸ್ ಆಗಿ ೨೭ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಹಗಲಿರುಳೆನ್ನದೆ ರೋಗಿಗಳಿಗೆ ಮಮತಾಮಯಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ ನೊಂದ ರೋಗಿಗಳ ಅಭಿಮಾನ ಗಳಿಸಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳ ಪ್ರಶಸ್ತಿ ನೀಡಿ ಗೌರವಿಸಿವೆ. ಈ ಮೂವರಿಗೂ ಕದಳಿಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ನಿಸ್ವಾರ್ಥ ಕಾಯಕಕ್ಕೆ ಸಂದ ಗೌರವವಾಗಿದೆ. ಇತ್ತೀಚೆಗೆ ನಡೆದ ಕನ್ನಡ ಪ್ರಥಮ ಮಹಿಳಾ ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಡಾ. ಸರ್ವಮಂಗಳ ಸಕ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಸ್ಕಿ ನಾಗರಾಜ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಹತ್ತನೇ ತರಗತಿ ಮಕ್ಕಳಿಗೆ ಪರೀಕ್ಷೆ ತಯಾರಿ ಜೊತೆಗೆ ಆತ್ಮವಿಶ್ವಾಸ ತುಂಬಿದರು. ಶರಣ ಸಂಸ್ಕೃತಿಯ ನೆರಳಲ್ಲಿ ಮಾದರಿಯಾದ ಬಸವಶ್ರೀ ಶಾಲೆ ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಬೆಳೆಸುತ್ತಿರುವುದು ಹೆಮ್ಮೆಯ ವಿಷಯವೆಂದು ಬಸವಶ್ರೀ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳು ಜ್ಞಾನಾರ್ಜನೆಗಾಗಿ ವಿದ್ಯಾಭ್ಯಾಸ ಮಾಡಬೇಕು ಬರೀ ಉದ್ಯೋಗಗಳಿಗಾಗಿ ಅಲ್ಲ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗಗಳತ್ತ ಮುಖ ಮಾಡಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಸುಗುಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.m ಬಸವನಗೌಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ ವಕೀಲರು ದಾನಮ್ಮ ಸುಭಾಶ್ಚಂದ್ರ ಹಾಗೂ ಪ್ರಶಸ್ತಿ ಪುರಸ್ಕೃತರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವು ಶಾಲೆಯ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡು ನವ್ಯಾ ಸ್ವಾಗತಿಸಿದರು. ಕು.ಅಂಕಿತಾ ಕಾರ್ಯಕ್ರಮ ನಿರೂಪಿಸಿದರು. ಸೌಜನ್ಯಾ ಸಹ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ವಿಜಯಲಕ್ಷ್ಮಿ ಸಹ ಶಿಕ್ಷಕಿ ವಂದಿಸಿದರು.