ವಿದ್ಯಾರ್ಥಿಗಳ ಪ್ರತಿಭೆ ಹೊರ ಹೊಮ್ಮಲು ಪ್ರೋತ್ಸಾಹ ಅಗತ್ಯ

ತುಮಕೂರು, ಜು. ೨೫- ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪ್ರತಿಭೆ ಮತ್ತು ಕೌಶಲ್ಯವನ್ನು ಪ್ರದರ್ಶಿಸುವುದಕ್ಕೆ ಸೂಕ್ತವಾದ ವೇದಿಕೆ ಶಿಕ್ಷಣ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ಎಂಬುದು ನಿರಂತರ ಕಲಿಕೆ. ಸತತ ಪರಿಶ್ರಮ ಮತ್ತು ಸೇವೆಯಿಂದಲೇ ದೊರಕುತ್ತದೆಯೇ ಹೊರತು ಅನ್ಯ ಮಾರ್ಗಗಳಿರುವುದಿಲ್ಲ. ಶಿಕ್ಷಣವನ್ನು ರೂಪಿಸಲು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಅಶೋಕ ನಗರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಡಾ. ಸಂಜಯ್‌ನಾಯಕ್ ಹೇಳಿದರು.
ನಗರದ ಅಶೋಕನಗರ ನಾಗರೀಕ ಹಿತರಕ್ಷಣಾ ಸಮಿತಿಯ ವತಿಯಿಂದ ೧೪ ನೇ ವರ್ಷದ ಸರ್ವ ಸದಸ್ಯರ ೨೦೨೨-೨೩ನೇ ಸಾಲಿನ ಸಭೆ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಮಕ್ಕಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ಶಿಕ್ಷಣ ಎಂಬುದು ಬಹುಮುಖ್ಯವಾಗಿದೆ. ಭಾಷಾಪ್ರೇಮ ಮತ್ತು ಭಾಷಾ ಜ್ಞಾನ ಇವೆರಡೂ ಮಕ್ಕಳಿಗೆ ಬಹಳ ಅವಶ್ಯಕವಾಗಿದೆ. ನಮ್ಮ ನಿಮ್ಮ ನಡುವೆ ಇವರು ಸಾಧಕರನ್ನು ಗುರುತಿಸಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಉತ್ತಮ ಎಂದು ಮಕ್ಕಳಿಗೆ ತಿಳಿಸಿದರು.
ಮಹಾನಗರ ಪಾಲಿಕೆಯ ಸದಸ್ಯರಾದ ಹೆಚ್. ಮಲ್ಲಿಕಾರ್ಜುನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಎಂಬುದು ಮೌಲ್ಯಯುತವಾದ ಶಿಕ್ಷಣವಾಗಿದೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಕೌಶಲ್ಯ, ಜ್ಞಾನ, ಶ್ರದ್ದೆಯಿಂದ ಕಲಿತರೇ ಯಶಸ್ಸು ಕಟ್ಟಿಟಬುತ್ತಿ ಹಾಗೂ ಆಧುನಿಕ ಜಗತ್ತಿನಲ್ಲಿ ಜ್ಞಾನವೇ ಶಕ್ತಿಯಾಗಿದ್ದು, ಜ್ಞಾನದಿಂದ ಅಗತ್ಯ ಸೌಲಭ್ಯ ಪಡೆಯ ಬಹುದು ಮತ್ತು ವಿದ್ಯಾರ್ಥಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಶೋಕನಗರ ನಾಗರೀಕ ಹಿತರಕ್ಷಣಾ ಸಮಿತಿಯ ಗೌರವ ಅಧ್ಯಕ್ಷರಾದ ಡಾ.ಕೆ. ರಾಜಶೇಖರ್ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿಯೂ ಶಿಕ್ಷಣ ಕ್ಷೇತ್ರ ಎಂಬುದು ಅತ್ಯುತ್ತಮವಾಗಿದೆ. ಶಿಕ್ಷಣ ಕಲಿಯುವ ಸ್ಥಳ ಮತ್ತು ವಾತಾವರಣ ಇವೆರಡು ವಿದ್ಯಾರ್ಥಿಗಳಿಗೆ ಅತಿ ಮುಖ್ಯವಾಗಿದೆ. ವಿದ್ಯಾರ್ಥಿಗಳ ಜವಾಬ್ದಾರಿಯಲ್ಲಿ ಪೋಷಕರ ಪಾತ್ರವೂ ಸಹ ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ ಉತ್ತಮ ಗುರಿಮುಟ್ಟಲ್ಲೂ ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಶೋಕನಗರ ನಾಗರೀಕ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿರಾದ ಬಿ.ಆರ್. ಉಮೇಶ್ ಮಾತನಾಡಿ, ಮೌಲ್ಯಯುತವಾದ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ನಡೆ-ನುಡಿ ಸಂಸ್ಕಾರವನ್ನು ವಿದ್ಯಾರ್ಥಿ ಜೀವನದಿಂದಲೇ ರೂಢಿಸಿಕೊಂಡು ಹೋಗಬೇಕು. ವಿದ್ಯಾರ್ಥಿಗಳ ಜೀವನವೂ ಉತ್ತಮ ಭದ್ರಬುನಾದಿಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಬದಲಾದರೂ ಸಂಸ್ಕಾರ ಮತ್ತು ಆಚಾರ ವಿಚಾರವನ್ನು ಎಂದು ಮರೆಯಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಶೋಕ ನಗರ ನಾಗರಿಕ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ವೆಂಕಟೇಶಯ್ಯ, ಖಜಾಂಚಿ ಜಿ.ಎನ್. ಜಯಪ್ರಕಾಶ್, ಎಂ.ಕೆ. ವೆಂಕಟಸ್ವಾಮಿ, ನಳಿನಾ ಶಿವಾನಂದ್ ಭಾಗವಹಿಸಿದ್ದರು.