ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಸೆ.23: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ನಾಡಿಗೆ ಪರಿಚಯಿಸುವ ಕಾರ್ಯ ನಿರಂತರವಾಗಿರಬೇಕಿದೆ ಎಂದು ಮರಿಯಮ್ಮನಹಳ್ಳಿಯ ಹಿರಿಯ ವೈದ್ಯ ಪಿ.ವಿಜಯ ವೆಂಕಟೇಶ ಹೇಳಿದರು.
ಅವರು ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ, ಆರ್ಯವೈಶ್ಯ ಸಮಾಜದ, ವಾಸವಿ ಯುಜನ ಸಂಘವು, ಗಜಾನನ ಹಬ್ಬದ ನಿಮಿತ್ತ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸಮಾಜ ವಿದ್ಯಾರ್ಥಿಗಳ ಪ್ರತಿ ವರ್ಷದ ಶೈಕ್ಷಣಿಕ ಪ್ರಗತಿಯನ್ನು ಗುರುತಿಸಿ, ಪುರಸ್ಕರಿಸುವ ಕಾರ್ಯ ಮುಂದಿನ ಹಂತದ ವಿದ್ಯಾರ್ಥಿಗಳಿಗೆ ಪ್ರೇರಣದಾಯಕವಾಗಲಿದೆ. ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಸದಾ ಇದ್ದು, ಸಂಘಟಕರು ಈ ಕಾರ್ಯವನ್ನು ಮುಂದುವರೆಸುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಚಿದ್ರಿ ಸತೀಶ್‌ವಹಿಸಿದ್ದರು. ವೇದಿಕೆಯಲ್ಲಿ ವಾಸವಿ ಮಹಿಳಾ ಸಮಾಜದ ಅಧ್ಯಕ್ಷೆ ಜಿ.ಜಯಲಕ್ಷ್ಮಿ, ವಾಸವಿ ಯುವಜನ ಸಂಘದ ಗೌರವ ಅಧ್ಯಕ್ಷ ಐ.ವೆಂಕಟರಮಣಶೆಟ್ಟಿ, ವಾಸವಿ ವನಿತೆಯರ ಸಂಘದ ಅಧ್ಯಕ್ಷೆ ಸೌಮ್ಯ ರಾಜೇಶ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿನಿ ವಿ.ಸಂಜನಾ, ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಜಿ.ಎಸ್.ಸಂಜನಾ, ಬಾಲ ಪ್ರತಿಭೆ ಪಟೇಲ್ ಭೈರ ಹನುಮಯ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜಿ.ವಿ.ಸುಬ್ಬರಾವ್‌ರನ್ನು ಗೌರವಿಸಲಾಯಿತು. ನಂತರ ವಿ. ಪ್ರ. ಕಲಾತಂಡದ ಕಲಾವಿದರಿಂದ ನೃತ್ಯ ಪ್ರದರ್ಶನಗಳು ನಡೆದವು.
ಈ ಸಂದರ್ಭದಲ್ಲಿ ವಾಸವಿ ಯುವಜನ ಸಂಘದ ಅಧ್ಯಕ್ಷ ಹರಿಪ್ರಸಾದ್, ವಾಸವಿ ಯುವಜನ ಸಂಘದ ಗೌರವ ಅಧ್ಯಕ್ಷ ಕಾಕಬಾಳ್ ಮಾರುತಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಇತರರು ಇದ್ದರು. ಕಾರ್ಯಕ್ರಮವನ್ನು ಪವಿತ್ರಾ ಕುಪ್ಪಾ ನಿರ್ವಹಿಸಿದರು.