ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಸಮಯ ಪ್ರಜ್ಞೆ ಅರಿವು ಮುಖ್ಯ

ಔರಾದ್ :ಮಾ.21: ಶಿಸ್ತು, ಸಮಯ ಪ್ರಜ್ಞೆ, ಆತ್ಮವಿಶ್ವಾಸ ಹೊಂದಿದ್ದರೆ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ, ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಂಯಮದ ಜೊತೆಗೆ ಸಮಯಪ್ರಜ್ಞೆ ಅರಿಯಬೇಕು ಎಂದು ಮುಖ್ಯಗುರು ಸವಿತಾ ಹೇಳಿದರು.

ಬುಧವಾರ ತಾಲೂಕಿನ ಜೋಜನಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ಏಳನೇ ತರಗತಿ ಮಕ್ಕಳ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ , ಮಕ್ಕಳ ಭವಿಷ್ಯ ಬುನಾದಿಯಿಂದ ರೂಪುಗೊಳ್ಳುವುದು ಪ್ರಾಥಮಿಕ ಹಂತದಿಂದಲೇ ಆಗಿದೆ. ಬುನಾದಿಯಲ್ಲಿ ಉತ್ತಮ ರೀತಿಯಿಂದ ಅಭ್ಯಾಸ ಮಾಡಿದ ಮಗು ಪ್ರೌಢ ಶಾಲಾ ಹಂತದಲ್ಲಿ ಉತ್ತಮ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ.

ಅನಾದಿಕಾಲದಿಂದಲೂ ಸರ್ಕಾರಿ ಶಾಲೆಯಲ್ಲಿ ಮತ್ತು ಅದು ಮಾತೃಭಾಷೆ ಕನ್ನಡದಲ್ಲಿಯೇ ಶಿಕ್ಷಣ ಪಡೆದ ಮಕ್ಕಳು ಇಂದಿನ ಸಮಾಜದಲ್ಲಿ ಅನೇಕ ವೃತ್ತಿಗಳಲ್ಲಿ ಇರುವುದು ನಾವು ಕಾಣುತ್ತೆವೆ. ಓದಲು ಮಕ್ಕಳಿಗೆ ಉತ್ತಮ ವಾತವರಣದ ಜೊತೆಗೆ ಉತ್ತಮ ಶಿಕ್ಷಕರ ಸಮ್ಮೀಲನ ಅತ್ಯಂತ ಪೂರಕವಾಗಿದೆ. ಅದು ನಮ್ಮ ಶಾಲೆಯ ಮಕ್ಕಳಲ್ಲಿ ನಾವು ಕಾಣುತ್ತೆವೆ. ಇಲ್ಲಿನ ಮಕ್ಕಳು ಮುಂದೆ ಹೋಗಿ ಉತ್ತಮ ರೀತಿಯಿಂದ ಓದಿ ಕಲಿತ ಶಾಲೆ, ಗ್ರಾಮ, ತಂದೆ ತಾಯಂದಿರಿಗೆ ಹೆಸರು ತರಲಿ ಎಂದು ಹಾರೈಸಿದರು.

ಸಂಪನ್ಮೂಲ ಶಿಕ್ಷಕ ಬಿ.ಎಂ. ಅಮರವಾಡಿ ಮಾತನಾಡಿ, ಮಕ್ಕಳು ಉನ್ನತ ಗುರಿಯನ್ನು ಹೊಂದಬೇಕಾದರೇ ನಿರಂತರವಾದ ಪರಿಶ್ರಮ, ಆಸಕ್ತಿಯ ಮೂಲಕ ಕಲಿಯುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು , ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಿ.ಆರ್.ಪಿ ಗಫರ್ ಖಾನ್, ಲಕ್ಷ್ಮಿ, ಗೋವಿಂದ, ಶಿವಶರಣಪ್ಪ, ಬಸವರಾಜ ಸ್ವಾಮಿ, ಪ್ರದೀಪ್, ಮಹಾನಮಧ , ಗೀತಾ, ಭಾರತಿ ಸೇರಿದಂತೆ ಇತರರಿದ್ದರು.