ವಿದ್ಯಾರ್ಥಿಗಳ ಜೀವನದಲ್ಲಿ ಗುರುಗಳ ಪಾತ್ರ ಬಹಳ ಮುಖ್ಯ

ಕಲಬುರಗಿ,ಸೆ.06:ವಿದ್ಯಾರ್ಥಿಗಳ ಜೀವನದಲ್ಲಿ ಗುರುಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶಿಕ್ಷಕ ವೃತ್ತಿಯು ನೊಬೆಲ್ ವೃತ್ತಿಯಾಗಿದೆ. ಶಿಕ್ಷಕರಿಗೆ ಯಾವಾಗಲೂ ಗೌರವ ಮತ್ತು ಪ್ರೀತಿಯನ್ನು ನೀಡಬೇಕು ಏಕೆಂದರೆ ಶಿಕ್ಷಕರು ನಮ್ಮನ್ನು ಯಶಸ್ವಿನ ಹಾದಿಯಲ್ಲಿ ಕಳುಹಿಸಲು ಪ್ರಯತ್ನಿಸುತ್ತಾರೆ. ಶಿಕ್ಷಕರಿಲ್ಲದ ಜೀವನ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಶರಣಬಸವೇಶ್ವರ ಸಂಸ್ಥಾನದಲ್ಲಿ ಕೆಲಸ ಮಾಡುವ ಎಲ್ಲ ಶಿಕ್ಷಕರು ಪೂಜ್ಯ ಡಾ.ಅಪ್ಪಾಜಿ ಮತ್ತು ಪೂಜ್ಯ ಡಾ.ಅವ್ವಾಜಿ ಅವರ ಮಾರ್ಗದರ್ಶನದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಸಂಸ್ಕಾರವನ್ನು ಕೊಡುತ್ತಿದ್ದಾರೆ. ಶರಣಬಸವ ವಿಶ್ವವಿದ್ಯಾಲಯದಲ್ಲಿ ಅನೇಕ ಸ್ನಾತಕೋತ್ತರ ವಿಷಯಗಳನ್ನು ಆರಂಭಿಸಲಾಗಿದ್ದು ವಿದ್ಯಾರ್ಥಿನಿಯರು ಅದರ ಲಾಭವನ್ನು ಪಡೆಯಬೇಕೆಂದು ಸಲಹೆ ನೀಡಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಭದ್ರ ಬುನಾದಿ ಹಾಕಿಕೊಡುವರು. ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವನು ಒಬ್ಬ ಗುರು. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರಧಾರನೇ ಶಿಕ್ಷಕ. ಪೂಜ್ಯ ಡಾ.ಅಪ್ಪಾಜಿಯವರು ಗುರುಗಳಿಗಿಂತ ಗುರುವಾಗಿ ನಮ್ಮೆಲ್ಲರನ್ನು ಬೆಳೆಸುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸುರ ಮಾತನಾಡಿ, ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನದಲ್ಲಿ ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಮೂಲಾರ್ಥವನ್ನು ತಿಳಿಸಿ ಬದುಕನ್ನು ಬೆಳಗುವವರು ಶಿಕ್ಷಕರಾಗಿರುತ್ತಾರೆ ಎಂದು ಹೇಳಿದರು.
ಪ್ರಾಧ್ಯಾಪಕರಾದ ಡಾ.ಪುಟ್ಟಮಣಿ ದೇವಿದಾಸ, ಡಾ.ವಿಜಯಕುಮಾರ ಕುಲಕರ್ಣಿ, ಸಂತೋಷ ಪೂಜಾರಿ ಹಾಗೆ ವಿದ್ಯಾರ್ಥಿನಿಯರು ಮಾತನಾಡಿದರು. ವೇದಿಕೆ ಮೇಲೆ ಕಲಾವಾಣಿ ವಿದ್ಯಾರ್ಥಿ ಸಂಘದ ಸಹ ಸಂಯೋಕಿ ಶ್ರೀಮತಿ ದೀಶಾ ಮೆಹತಾ, ಸದಸ್ಯರಾದ ಕು.ವೈಶಾಲಿ ನಾಟೀಕರ ಮತ್ತು ಕು.ಚಂದ್ರಕಲಾ ಪಾಟೀಲ ಇದ್ದರು.
ಕು.ಭಾಗ್ಯವಂತಿ ಎಸ್.ಕೆ. ಸ್ವಾಗತಿಸಿದರೆ, ಕು.ಯುಕ್ತ ಗಾಂಜಿ ನಿರೂಪಿಸಿದರು. ಕು.ಚಂದ್ರಕಲಾ ಅತಿಥಿ ಪರಿಚಯ ಮಾಡಿದರು, ಕು.ಐಶ್ವರ್ಯ ಬೆಳಮಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಶಿಕ್ಷಕ, ಶಿಕ್ಷಕಕೇತರರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.