ವಿದ್ಯಾರ್ಥಿಗಳ ಕಲೆ ಗುರುತಿಸಲು ವೇದಿಕೆ ಅವಶ್ಯಕ

ಅಣ್ಣಿಗೇರಿ,ಸೆ14 : ಸಮಾಜದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿಗೆ ಒಂದೊಂದು ವಿಶೇಷವಾದ ಕಲೆ ಇರುತ್ತೆ ಅಂತಹ ಕಲೆಯನ್ನು ಗುರ್ತಿಸಲಿಕ್ಕೆ ಪ್ರತಿಭಾ ಕಾರಂಜಿ/ ಕಲೋತ್ಸವದಂತಹ ವೇದಿಕೆಗಳು ಅತ್ಯವಶ್ಯಕ ಎಂದು ಪುರಸಭೆ ಅಧ್ಯಕ್ಷೆ ಗಂಗಾ ರಮೇಶ ಕರೆಟ್ಟನವರ ಹೇಳಿದರು.
ಅವರು ಸ್ಥಳೀಯ ಬಾಪೂಜಿ ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಅಣ್ಣಿಗೇರಿ-1 ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ/ ಕಲೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿರುವ ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಸಂಸ್ಥೇಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಶಿಕ್ಷಣ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ಮುರನಾಳ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಸಮಾಜದ ಮುಂಚೂಣಿಗೆ ತರಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸ್ವಾಗತಾರ್ಹವಾಗಿದೆ. ಪಾಲಕರು ಮತ್ತು ಶಿಕ್ಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೋರ ಹಾಕಲು ಇಂತಹ ವೇದಿಕೆಗಳನ್ನು ನಿರ್ಮಾಣ ಮಾಡಿಕೊಡಬೇಕು ಅಂದಾಗ ಮಾತ್ರ ಮಕ್ಕಳಲ್ಲಿರುವ ಪ್ರತಿಭೆ ನಮಗೆ ತಿಳಿದು ಬರುತ್ತದೆ.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಾಚಾರ್ಯ ಎನ್.ಡಿ.ಧಾರವಾಡ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಒಂದೊಂದು ವಿಶಿಷ್ಟವಾದ ಕಲೆ ಇರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಅವರ ಕಲೆಗಳನ್ನು ನಾವು ಗುರ್ತಿಸಿ ಪ್ರೋತ್ಸಾಹಿಸಿದರೆ ಮುಂದೊಂದು ದಿನ ಆ ವಿದ್ಯಾರ್ಥಿ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಬೆಳೆಯಬಲ್ಲ ಎಂದರು.
ಕಲೋತ್ಸವದಲ್ಲಿ 24 ಶಾಲೆಯ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ತಮ್ಮ ಪ್ರತಿಭೆಗಳನ್ನು ಪ್ರಸ್ತುತ ಪಡಿಸುತ್ತಿರುವುದು ಎಲ್ಲರ ಗಮನ ಸೆಳೆಯುವಂತಿತ್ತು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬಾಜಾನ ಮುಲ್ಲಾನವರ, ಸದಸ್ಯೆ ಬಸವಣ್ಣೆವ್ವ ದಿಡ್ಡಿ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವ್ಹಿ.ಎಂ.ಹಿರೇಮಠ, ಸಿಆರ್‍ಪಿ ಎ.ಎಂ.ದೊಡ್ಡಮನಿ, ಮಂಜು ನಾಯ್ಕ, ಅನ್ವರಭಾಷಾ ಹುಬ್ಬಳ್ಳಿ, ಎನ್.ಬಿ.ಬೀರಣ್ಣವರ, ಎ.ಆರ್.ಅಕ್ಕಿ, ಬಿ.ವ್ಹಿ.ಅಂಗಡಿ, ರವಿ ಬೆಳಹಾರ, ಮಹಾಂತೇಶ ವಸ್ತ್ರದ, ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.