ವಿದ್ಯಾರ್ಥಿಗಳೇ ದುಶ್ಚಟಗಳಿಂದ ದೂರವಿರಿ

ಶಹಾಬಾದ,ಜ.7-ತಾಲೂಕಿನ ಮಾಲಗತ್ತಿ ಗ್ರಾಮ ಪಂಚಾಯತ ಹಾಗೂ ಮಲ್ಲಾಬಾದನ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಐಇಸಿ ಚಟುವಟಿಕೆಗಳ ಕುರಿತು ಉಪನ್ಯಾಸ ಹಾಗೂ ಪ್ರಮಾಣ ವಚನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಂ.ಪಂ.ಸಿಬ್ಬಂದಿ ಸಿದ್ದಮ್ಮ ಆರ್ ಸಾಹುಕಾರ್ ರವರು ಬಯಲು ಶೌಚಾಲಯದಿಂದ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು, ಆದಕಾರಣ ವಿದ್ಯಾರ್ಥಿನಿಯರು ವಯಕ್ತಿಕ ಶೌಚಾಲಯವನ್ನು ಕಟ್ಟಿಸಿಕೊಳ್ಳುವುದಕ್ಕಾಗಿ ಮನೆಯಲ್ಲಿ ಹಠ ಮಾಡಬೇಕೆಂದರು. ತದನಂತರ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಹಲವಾರು ವಿದ್ಯಾರ್ಥಿಗಳು ಬಾಲ್ಯದಿಂದಲೇ ಧೂಮಪಾನ ಹಾಗೂ ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗಿ ಮುಂದಿನ ತಮ್ಮ ಉಜ್ವಲ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದಕಾರಣ ವಿದ್ಯಾರ್ಥಿಗಳಾದ ದುಶ್ಚಟಗಳಿಂದ ದೂರವಿರಬೇಕೆಂದು ಮನವಿ ಮಾಡಿಕೊಂಡರು.
ತದನಂತರ ಒಣ ಕಸ, ಹಸಿ ಕಸ, ಪ್ಲಾಸ್ಟಿಕ್ ಬಳಕೆಯ ನಿಷೇಧ, ಬಾಲ್ಯ ವಿವಾಹ, ವರದಕ್ಷಿಣೆ, ಮಕ್ಕಳ ಹಕ್ಕುಗಳ ರಕ್ಷಣೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಿತು. ನಂತರ ಎಲ್ಲರೂ ಪ್ರಮಾಣ ವಚನವನ್ನು ಸ್ವೀಕರಿಸಿದರು. ಗ್ರಾಂ.ಪಂ. ಸಿಬ್ಬಂದಿ ವರ್ಗ, ಶಾಲಾ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅನೇಕರಿದ್ದರು.