ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ- ಶಾಸಕ ನಾರಾ ಭರತ್‍ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಸೆ.2, ಶಿಕ್ಷಣ ರಂಗವೂ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸ್ಪರ್ಧಾತ್ಮಕ ಮನೋಭಾವ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸುವ ಗುರಿಯನ್ನು ಹೊಂದಬೇಕು ಎಂದು ಬಳ್ಳಾರಿ ನಗರ ಶಾಸಕರಾದ ನಾರಾ ಭರತ್ ರೆಡ್ಡಿ ಅವರು ತಿಳಿಸಿದರು.
ಅವರು ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2022-23ನೇ ಶೈಕ್ಷಣಿಕ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಪೈಪೋಟಿ ಇದೆ. ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಸ್ಪರ್ಧೆವೊಡ್ಡಲೇ ಬೇಕು. ಉನ್ನತ ಅಧಿಕಾರಿಗಳಾಗಲು, ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಅವಿರತ ಶ್ರಮ ಇದ್ದಾಗ ಮಾತ್ರ ಅಂತಹ ಒಂದು ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಗುರು ಹಿರಿಯರಿಗೆ, ತಂದೆ ತಾಯಿಗಳಿಗೆ ಗೌರವವನ್ನು ನೀಡಬೇಕು. ದೇಶ ಮತ್ತು ನಾಡಿನ ಬಗ್ಗೆ ಒಳ್ಳೆಯ ಅಭಿಮಾನವನ್ನು ಹೊಂದುವ ಮೂಲಕ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ಕರೆ ನೀಡಿದರು.
ಇಂದಿನ ದಿನಗಳಲ್ಲಿ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿದ್ದು, ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಸೇವಾ ಮನೋಭಾವ, ಸಮಾಜ ಸೇವೆ ಮಾಡುವಂತಹ ಗುಣಗಳನ್ನು, ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಗುರಿಯನ್ನು ಸಾಧಿಸಬೇಕು. ವಿದ್ಯಾರ್ಥಿನಿಯರನ್ನು ವಿದ್ಯಾರ್ಥಿಗಳು ತಮ್ಮ ಸಹೋದರಿಯರಂತೆ ಕಾಣಬೇಕು. ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಮಹಿಳಾ ಸಬಲೀಕರಣಕ್ಕೆ ಇಂದಿನ ದಿನಗಳಲ್ಲಿ ಸರ್ಕಾರ ಒತ್ತು ನೀಡುತ್ತಿದೆ ಎಂದು ನುಡಿದರು.
ಮುಖ್ಯಭಾಷಣಕಾರರಾಗಿ ಆಗಮಿಸಿದ್ದ ಹೊಸಪೇಟೆಯ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ಎಚ್.ಎಂ.ಚಂದ್ರಶೇಖರಶಾಸ್ತ್ರಿ ಅವರು ಮಾತನಾಡಿ, ವಿದ್ಯಾರ್ಥಿ ಜೀವನವು ಬಂಗಾರದ ಜೀವನವಾಗಿದ್ದು, ವಿದ್ಯಾರ್ಥಿ ದೆಸೆಯಲ್ಲಿಯೇ ತಮ್ಮ ಮಹೋನ್ನತ ಕನಸುಗಳನ್ನು ಸಾಧಿಸಲು ಸನ್ನದ್ಧರಾಗಬೇಕು. ಓದು ಒಕ್ಕಾಲು ಬುದ್ದಿ ಮುಕ್ಕಾಲು ಎಂಬ ಗಾದೆ ಮಾತಿನಂತೆ ವಿದ್ಯೆ ಒಂದು ಭಾಗವಾದರೆ ಸ್ವಯಂ ಬುದ್ಧಿಯಿಂದ ಜೀವನದಲ್ಲಿ ಸಾಧಿಸುವುದು ಮೂರು ಭಾಗದಷ್ಟು ಇರುತ್ತದೆ ಎಂದರಲ್ಲದೆ ತಂದೆ ತಾಯಿಗಳನ್ನು ಪೋಷಣೆ ನಿಮ್ಮ ಜವಾಬ್ದಾರಿಯಾಗಿರುತ್ತದೆ. ಸಮಾಜದಲ್ಲಿ ಒಳ್ಳೆಯ ನಡೆ, ನುಡಿವುಳ್ಳವರಾಗಿ ಬೆಳೆಯಬೇಕೆಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ವಕೀಲರಾದ ಜಯರಾಮ್ ಅವರು ಮಾತನಾಡಿ, ವಿದ್ಯಾರ್ಥಿಗಳು ಏನೇ ಮಾಡಿದರೂ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಉತ್ತಮ ಅಂಕಗಳನ್ನು ಪಡೆದು ಉನ್ನತ ಹುದ್ದೆಗಳನ್ನು ಸಂಪಾದಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ ಹೆಚ್.ಕೆ. ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ, 1985ರಲ್ಲಿ 80 ವಿದ್ಯಾರ್ಥಿಗಳಿಂದ ಆರಂಭವಾದ ಸರಳಾದೇವಿ ಕಾಲೇಜು ರಾಜ್ಯದಲ್ಲಿಯೇ ಅತಿಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಕಂಪ್ಯೂಟರ್ ಲ್ಯಾಬ್ ಮಾಡಲಾಗುತ್ತಿದೆ. ಉತ್ತಮ ಗ್ರಂಥಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ನೀಡಲಾಗುತ್ತಿದೆ. ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕಾಗಿ ಆಡಿಟೋರಿಯಂ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಮಹಾದಾನಿಗಳಾದ ಮನೀಶ್ ಮಿತ್ತಲ್ ಮತ್ತು ದಂಪತಿಗಳು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿಶ್ವನಾಥನಾಯಕ್, ರಾಮು, ಸಲ್ಮಾ ಎಸ್.ಕೆ, ಡಾ.ಆರ್.ಮರೇಗೌಡ, ಎಸ್.ಎಸ್.ಪಾಟೀಲ್, ಡಾ.ಎಸ್.ವಿ. ಜೈನ್ ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ನಡೆದ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.
ಇದೇ ವೇಳೆ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ.ಶೈಲಜಾ ಎಸ್.ಎಂ ಅವರು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ನೀಡುವುದಕ್ಕಾಗಿ  ಒಂದು ಲಕ್ಷ ರೂಪಾಯಿಗಳ ದತ್ತಿ ನಿಧಿಯನ್ನು ದೇಣಿಗೆಯಾಗಿ ಪ್ರಾಂಶುಪಾಲರಾದ ಡಾ.ಮಂಜುನಾಥರೆಡ್ಡಿ ಹೆಚ್.ಕೆ, ಅವರಿಗೆ ನೀಡಿದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದು ಶೋಭೆಯನ್ನುಂಟು ಮಾಡಿತ್ತು. ಗಣೇಶ್ ಎಂಬ ವಿದ್ಯಾರ್ಥಿಯು ಸಂಗೀತ ಗಾಯನ ಮಾಡುವ ಮೂಲಕ ಮನರಂಜನೆ ನೀಡಿದರು.ಗಾಂಧಿನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯವರು ಅಗತ್ಯ ಬಂದೋಬಸ್ತ್ ಒದಗಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿದರು.
ಆರಂಭದಲ್ಲಿ ವಿದ್ಯಾರ್ಥಿ ತಂಡದಿಂದ ಪ್ರಾರ್ಥನೆ ಗೀತೆ ಮತ್ತು ನಾಡಗೀತೆಯ ಗಾಯನ ನಡೆಯಿತು. ಡಾ.ದಸ್ತಗೀರ್‍ಸಾಬ್ ದಿನ್ನಿ ಅವರು ವೇದಿಕೆಯ ಮೇಲಿದ್ದ ಎಲ್ಲ ಗಣ್ಯರನ್ನು ಸ್ವಾಗತಿಸಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಕೆ.ಎನ್.ರಾಮಾಂಜನೇಯ ಅವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಡಾ.ಮಂಜುನಾಥ ಅವರು ವಂದಿಸಿದರು.