ವಿದ್ಯಾರ್ಥಿಗಳು ಸುಂದರ ಬದುಕು ರೂಪಿಸಿಕೊಳ್ಳಿ

ಚಿಕ್ಕಬಳ್ಳಾಪುರ, ಜು.೨೮:ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ, ಶ್ರದ್ಧೆಯನ್ನು ಅಳವಡಿಸಿಕೊಂಡು ಸುಂದರ ಬದುಕನ್ನು ರೂಪಿಸಿಕೊಳ್ಳಬೇಕು. ನಿರಂತರ ಅಭ್ಯಾಸ ಮಾಡುವ ಮೂಲಕ ಮುಂದಿನ ಭವಿಷ್ಯವನ್ನು ಉತ್ತಮವಾಗಿರಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಹೊರವಲಯದ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯದ ಬಿ.ಜಿ.ಎಸ್ ಆಡಿಟೋರಿಯಂನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ-೨೦೨೨ ( ಗ್ರಾಜುಯೇಷನ್ ಡೇ) ಸಮಾರಂಭವನ್ನು ಉದ್ಘಾಟಿಸಿ ಅವರು ಆರ್ಶೀವಾಚನ ನೀಡಿದರು.
ಪದವೀಧರ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ರೂಪು ರೇಷೆಗಳನ್ನು ರಚಿಸಿಕೊಂಡು, ಸಮಾಜದ ಏಳಿಗೆಗೆ ಶ್ರಮಿಸಬೇಕು. ತಮ್ಮ ಓದಿಗೆ ಪೋಷಕರು ನಿರ್ವಹಿಸಿದ ಜವಾಬ್ದಾರಿಯನ್ನು ಮರೆಯದೆ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂದು ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ಡಾಕ್ಟರೇಟ್ ಪದವೀಧರರು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪದವಿ ಪಡೆದ ವೈಮಾನಿಕ ವಿಭಾಗದಿಂದ ೬೧, ಕಾಮಗಾರಿ ವಿಭಾಗದಿಂದ ೧೨೬, ಯಾಂತ್ರಿಕ ವಿಭಾಗದಿಂದ ೧೧೭, ವಿದ್ಯುನ್ಮಾನ ವಿಭಾಗದಿಂದ ೧೯೬, ದೂರಸಂಪರ್ಕ ವಿಭಾಗದಿಂದ ೮, ಗಣಕಯಂತ್ರ ವಿಭಾಗದಿಂದ ೧೪೧, ಮಾಹಿತಿ ತಂತ್ರಜ್ಞಾನ ವಿಭಾಗದಿಂದ ೧೨೦ ಮತ್ತು ಎಂ.ಟೆಕ್ ೨೧, ಎಂ.ಬಿ.ಎ ವಿಭಾಗದಿಂದ ೫೫ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಜೆ.ಸಿ.ಐ.ಟಿ ಆಡಳಿತ ಮಂಡಳಿಯ ಸದಸ್ಯರಾದ ಡಾ.ಕೆ.ಪಿ.ಶ್ರೀನಿವಾಸ ಮೂರ್ತಿ, ಪಿ.ಆರ್ ಶ್ರೀನಿವಾಸ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ, ರಿಜಿಸ್ಟ್ರಾರ್ ಜೆ. ಸುರೇಶ ಉಪಸ್ಥಿತರಿದ್ದರು.