ವಿದ್ಯಾರ್ಥಿಗಳು ಸಾಧನೆಯ ಛಲ ಬೆಳೆಸಿಕೊಳ್ಳಲು ಕರೆ

ಸಂಜೆವಾಣಿ ವಾರ್ತೆಹೂವಿನಹಡಗಲಿ, ಆ.18: ಗ್ರಾಮೀಣ ವಿದ್ಯಾರ್ಥಿಗಳು ಸಾಧನೆಯ ಛಲ ಬೆಳೆಸಿಕೊಂಡು ದೇಶ ಬೆಳಗುವ ಪ್ರತಿಭೆಗಳಾಗಿ ರೂಪುಗೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇಶಕ ನಾಗರಾಜ ಹವಾಲ್ದಾರ್ ಹೇಳಿದರು.ಇಲ್ಲಿನ ಜಿಬಿಆರ್ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆಯ ಸಾಧನೆಯಲ್ಲಿ ಭಾರತ ನಾಗಲೋಟದಲ್ಲಿದೆ. ಇಲ್ಲಿನ ಗ್ರಾಮೀಣ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ತಿಳಿಸಿದರು.ವಿದ್ಯಾರ್ಥಿಗಳು ಛಲ, ಶ್ರದ್ಧೆ ಬೆಳೆಸಿಕೊಂಡು ಓದಿದಲ್ಲಿ ಭವಿಷ್ಯ ಉತ್ತಮವಾಗಿರುತ್ತದೆ. ಸಾಧಿಸುವ ಹಂಬಲವುಳ್ಳವರು ಟಾಪರ್ಸ್ ವಿದ್ಯಾರ್ಥಿಗಳನ್ನು ಮಾದರಿಯಾಗಿಸಿಕೊಳ್ಳಬೇಕು. ಉಪನ್ಯಾಸಕರು ಉತ್ತಮ ರೀತಿಯಲ್ಲಿ ಬೋಧನೆ ಮಾಡಿ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.ಜಿಬಿಆರ್ ಪದವಿ ಕಾಲೇಜು ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಮಾತನಾಡಿ, ಪದವಿಪೂರ್ವ ಶಿಕ್ಷಣ ಹಂತ ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳುವ ಮಹತ್ವದ ಘಟ್ಟ. ಜಗತ್ತನ್ನು ಜ್ಞಾನ ಆಳುತ್ತಿದೆ ಹೊರತು ಭೌತಿಕ ಸಂಪತ್ತು ಅಲ್ಲ. ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣ ಕಲಿಕೆಯ ಜತೆಗೆ ಬದುಕು ಕಟ್ಟಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ತಿಮ್ಮಯ್ಯ ಪುರ್ಲೆ, ಜಿಲ್ಲಾಧ್ಯಕ್ಷ ಗೌಡ್ರು ಬಸವರಾಜಪ್ಪ ಮಾತನಾಡಿದರು. ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಸೆಟ್ಟಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಷಣ್ಮುಖಪ್ಪ ಬಾಗೇವಾಡಿ, ನಿವೃತ್ತ ಉಪನ್ಯಾಸಕ ಕೆ.ದ್ಯಾಮಜ್ಜ, ಸಿಬ್ಬಂದಿ ಪಕ್ಕೀರಪ್ಪ ಅವರನ್ನು ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಪೂಜಾರ್, ಪ್ರಾಚಾರ್ಯರಾದ ಕೋರಿ ಹಾಲೇಶ, ಎ.ಕೊಟ್ರಗೌಡ, ಅಮರೇಗೌಡ ಎನ್.ಪಾಟೀಲ್, ಡಿ.ಸತೀಶ, ಕರೀಂಸಾಬ್, ಸಂಘದ ಪದಾಧಿಕಾರಿಗಳಾದ ಚಿತ್ತರಂಜನ್, ನಾಗಲಿಂಗಸ್ವಾಮಿ ಉಪಸ್ಥಿತರಿದ್ದರು.