ವಿದ್ಯಾರ್ಥಿಗಳು ಸದಾ ಆಶಾವಾದಿಗಳಾಗಿರಬೇಕು : ರಮೇಶ್


ಸಂಜೆವಾಣಿ ವಾರ್ತೆ
ಹೊಸಪೇಟೆ ಆ6: ವಿದ್ಯಾರ್ಥಿಗಳು ಸದಾ ಆಶಾವಾದಿಗಳಾಗಿ ಪ್ರತಿಯೊಂದು ಕಾರ್ಯವನ್ನು ಪ್ರೀತಿಯಿಂದ ನಿರ್ವಹಿಸಿದಾಗ ಮಾತ್ರ ಜೀವನ ಯಶಸ್ವಿಯಾಗುತ್ತದೆ ಎಂದು ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ ಹೇಳಿದರು.
ಕನ್ನಡ ವಿವಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಿಶೇಷ ಘಟಕದಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಬದುಕಿನಲ್ಲಿ ಆಶಾವಾದಿತನ ಬಹಳ ಮುಖ್ಯ. ಆಶಾವಾದಿತನ ಇಲ್ಲದ ಬದುಕು ಶೂನ್ಯ. ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಉದ್ಯೋಗ ಪಡೆಯಬೇಕಾದರೆ ಪರಿಶ್ರಮ ಬಹುಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯುವುದರ ಮೂಲಕ ವಿದ್ಯಾರ್ಥಿಗಳು ಹಲವಾರು ಉದ್ಯೋಗಾವಕಾಶಗಳನ್ನು ಪಡೆಯಬಹುದು. ತಂತ್ರಜ್ಞಾನ ಯುಗದಲ್ಲಿ ಯುವಕರು ಅನೇಕ ಮನರಂಜನೆಯ ಮಾಧ್ಯಮಗಳಲ್ಲಿ ತಮ್ಮ ಅಮೂಲ್ಯ ಸಮಯ ಕಳೆಯುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ತರಗತಿಗಳು ಯುವಜನರ ಮನಸ್ಸು ಪರಿವರ್ತಿಸುವುದರ ಮೂಲಕ ಸದೃಢ ಬದುಕನ್ನು ರೂಪಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತವೆ ಎಂದರು.
ಸಿಂಡಿಕೇಟ್ ಸದಸ್ಯ ಡಾ.ಓಬಯ್ಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಕಾಳಜಿವಹಿಸಬೇಕು. ಈ ತರದ ಸ್ಪರ್ಧಾತ್ಮಕ ತರಬೇತಿಗಳಲ್ಲಿ ತೊಡಗಿಸಿಕೊಂಡು ಉದ್ಯೋಗ ಪಡೆದುಕೊಳ್ಳಬೇಕು ಎಂದರು.
ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಗಳು ಹೆಚ್ಚಾದಂತೆ ಮಾನದಂಡ ಹಾಗೂ ಅರ್ಹತೆಗಳು ಹೆಚ್ಚುತ್ತಿವೆ. ಈ ಹಿನ್ನಲೆಯಲ್ಲಿ ಯಶಸ್ಸು ಪಡೆಯಲು ತರಬೇತಿ ಅಗತ್ಯ ಎಂದರು.
ಕಾರ್ಯಕ್ರಮದ ಸಂಚಾಲಕ ಡಾ.ಸಿದ್ದಗಂಗಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ನಿಂಗಪ್ಪ, ಸಿಂಡಿಕೇಟ್ ಸದಸ್ಯರಾದ ಜೈ ಭೀಮಕಟ್ಟಿ, ಸಮ್ಮಿ ಉಲ್ಲಾಖಾನ್ ಇತರರು ಪಾಲ್ಗೊಂಡಿದ್ದರು.