ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಳ್ಳಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.29: ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಶಿಸ್ತು, ಸಂಯಮ,ದೇಶಾಭಿಮಾನ, ಉನ್ನತ ಗುರಿ ‌ಹಾಗೂ ನಾಯಕತ್ವ ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ತಂಡ ಹಮ್ಮಿಕೊಂಡಿದ್ದ ಭಾರತ ಸೇವಾದಳ-1923 ಹಾಗೂ ಸ್ಥಾಪಕ ನಾ.ಸು.ಹರ್ಡೇಕರ್ ಅವರ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹರ್ಡೇಕರ್ ಅವರು ವೈದ್ಯಕೀಯ ಶಿಕ್ಷಣವನ್ನು ಅಮೇರಿಕಾ ದೇಶದಲ್ಲಿ ಪಡೆದು ಅಲ್ಲಿನ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿ, ಭಾರತದ ಸಮಸ್ಯೆ ಕುರಿತು ಚರ್ಚೆ ಮಾಡುತ್ತಾ,1921ರಲ್ಲಿ ಭಾರತ ದೇಶಕ್ಕೆ ಬಂದು, ಬ್ರಿಟಿಷ್ ರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ 1923ರಲ್ಲಿ ಭಾರತ ಸೇವಾದಳ ಸ್ಥಾಪಿಸಿದರು. ಆ ಮೂಲಕ ಹೋರಾಟದ ಕಿಚ್ಚನ್ನು ಯುವಕರಲ್ಲಿ ಹಚ್ಚಿದರು. ಆದ್ದರಿಂದ ಅವರ ಆದರ್ಶಗಳನ್ನು ಹಾಗೂ ದೇಶಾಭಿಮಾನ ನಾವು ನೀವೆಲ್ಲಾ ಮೈಗೂಡಿಸಿಕೊಂಡು ಬಾಳೋಣ ಎಂದರು.
ಶಿಕ್ಷಕರಾದ ದಿಲ್ಷಾದ್ ಬೇಗಂ, ರಾಮಾಂಜಿನೇಯ, ಶ್ರೀದೇವಿ, ನಿಂಗಮ್ಮ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ ಮುಂತಾದವರು ಉಪಸ್ಥಿತರಿದ್ದರು.