
ಕಲಬುರಗಿ,ಆ.11: ಇಂದಿನ ವಿದ್ಯಾರ್ಥಿ ಜನಾಂಗ ತಮ್ಮ ದೈನಂದಿನ ಓದು ಬರಹದ ಜತೆಗೆ ಸಾಹಿತ್ಯಿಕ ಕೃತಿಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕೆಂದು ಹಿರಿಯ ಕಥೆಗಾರ ಡಾ. ಕೆ.ಎಸ್. ನಾಯಕ್ ಅವರು ಹೇಳಿದರು.
ಹೈದ್ರಾಬಾದ್ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯದ ಕನ್ನಡ ಸಾಹಿತ್ಯ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಶುಕ್ರವಾರ ನಗರದ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಕೃಷಿ ಮಾಡಲು ಆಳವಾದ ಅಧ್ಯಯನ ಅವಶ್ಯಕ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಥಾ ಸಾಹಿತ್ಯಕ್ಕೆ ಬಹಳಷ್ಟು ದೊಡ್ಡ ಪರಂಪರೆ ಇದೆ. ಈ ಇಂದು ಪ್ರಕಾರ ತುಂಬಾ ಸಮೃದ್ಧವಾಗಿ ಬೆಳೆದಿದೆ. ಕಥೆ ರಚನೆಗೆ ವಸ್ತು, ವಿಷಯ, ಭಾಷೆ ಬಹಳಷ್ಟು ಮುಖ್ಯವಾಗಿರುತ್ತವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಥೆಗಳನ್ನು ರಚಿಸಬೇಕಾಗುತ್ತದೆ ಎಂದರು.
ಇನ್ನೋರ್ವ ಕಥೆಗಾರ ಸಿ.ಎಸ್. ಆನಂದ್ ಅವರು ಮಾತನಾಡಿ, ಸಾಹಿತ್ಯ ಕೇವಲ ಬದುಕಿನ ಪ್ರತಿಬಿಂಬವನ್ನು ತೋರುವ ಕನ್ನಡಿ ಮಾತ್ರವಲ್ಲ, ಅದು ಬದುಕಿನ ಗತಿಬಿಂಬವೂ ಆಗಿರುತ್ತದೆ. ಮಾನವೀಯ ಸಂಬಂಧಗಳು ಬಿರುಕು ಬಿಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸೃಜನಶೀಲ ಬರಹಗಾರ ತನ್ನ ಸೂಕ್ಷ್ಮ ಸಂವೇದನೆಯಿಂದ ವರ್ತಮಾನದ ಅನೇಕ ಸಂಗತಿಗಳನ್ನು ವಸ್ತು ವಿಷಯವಾಗಿ ಆಯ್ಕೆ ಮಾಡಿಕೊಂಡು ¸ಮಾಜಕ್ಕೆ ಅರ್ಥಪೂರ್ಣವಾದ ಸಂದೇಶ ಸಾರುವ ಸಾಹಿತ್ಯ ರಚಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ಇಂದಿನ ಸಮಾಜದಲ್ಲಿ ಮನೆ ಮಾಡಿರುವ ಜಾತಿ, ಧರ್ಮ, ಮತ-ಪಂಥಗಳ ಮಧ್ಯೆ ಇರುವ ಅಡ್ಡಗೋಡೆಗಳನ್ನು ಬುಡಮೇಲು ಮಾಡುವ ನಿಟ್ಟಿನಲ್ಲಿ ಇಂದಿನ ಬರಹಗಾರರು ಸಾಹಿತ್ಯ ಕೃಷಿ ಮಾಡಬೇಕಾಗಿದೆ ಎಂದರು.
ಕನ್ನಡ ಪ್ರಾಧ್ಯಾಪಕ ಡಾ. ನಾಗೇಂದ್ರ ಮಸೂತಿ ಅವರು ಮಾತನಾಡಿ, ನಾವು ಓದುವ ಪಠ್ಯ ಪುಸ್ತಕಗಳಿಂದ ಬರೀ ಜ್ಞಾನ ದೊರೆತರೆ, ಸಾಹಿತ್ಯಾತ್ಮಕ ಪುಸ್ತಕಗಳಿಂದ ಆ ಜ್ಞಾನದ ಜತೆಗೆ ವೈಚಾರಿಕತೆ ಬೆಳೆದು ಬುದ್ದಿ ಮತ್ತು ಭಾವದ ವಿಕಾಸವಾಗುತ್ತದೆ ಎಂದರು.
ಕಥೆಗಾರರಾದ ಡಾ. ಕೆ.ಎಸ್. ನಾಯಕ್ ಅವರ `ಲಚುಮಿ ಅತ್ತೆ ಮತ್ತು ಸಿ.ಎಸ್.ಆನಂದ ಅವರ ಹಡೆದವ್ವ ಕಥಾ ಪುಸ್ತಕಗಳ ಕುರಿತು ಲೇಖಕರೊಂದಿಗೆ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಮುಕ್ತ ಸಂವಾದ ನಡೆಸಿದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ. ರಾಜೇಂದ್ರ ಬಿ. ಕೊಂಡಾ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ತಾಲ್ಲೂಕಾಧ್ಯಕ್ಷ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ, ಉಪನ್ಯಾಸಕರಾದ ದಾನಮ್ಮಾ ಬಿರಾದಾರ್, ಕವಿತಾ ಎ.ಎಂ., ಡಾ. ಶಿವಗಂಗಾ ಬಿಲಗುಂದಿ, ಮೇಘನಾ ಕೆರಳ್ಳಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಮುಖರಾದ ರಾಜೇಂದ್ರ ಮಾಡಬೂಳ್, ಸಿದ್ಧರಾಮ್ ಹಂಚನಾಳ್, ಪ್ರಸಾದ್ ಜೋಶಿ, ಪಿಡ್ಡಪ್ಪಾ ಜಲಗರ್, ನಾಗನ್ನಾಥ್ ಯಳಸಂಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.