ವಿದ್ಯಾರ್ಥಿಗಳು ಶಾಲೆಯ ಗೌರವ ಉಳಿಸಿ ಬೆಳೆಸಬೇಕು

ಗೌರಿಬಿದನೂರು, ಆ.೩- ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡುವ ಮೂಲಕ ಜನ್ಮನೀಡಿದ ಪೋಷಕರು ಮತ್ತು ವಿದ್ಯೆ ಕಲಿಸಿದ ಶಾಲೆಯ ಗೌರವವನ್ನು ಉಳಿಸಿ ಬೆಳೆಸಬೇಕಾಗಿದೆ, ಈ ನಿಟ್ಟಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಮುಖ್ಯ ಶಿಕ್ಷಕರಾದ ಬಿ.ಕೆ.ರಾಮಚಂದ್ರ ತಿಳಿಸಿದರು.
ನಗರದ ಕೋಟೆಯಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತವೆ. ಇಲ್ಲಿ ಕಲಿತು ಬೆಳೆದಂತಹ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಉತ್ತಮ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ. ಇದರಿಂದಾಗಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವ ಪ್ರತಿಯೊಬ್ಬರೂ ಕೂಡ ಆಸಕ್ತಿ ಮತ್ತು ಅವದಾನದಿಂದ ಕಲಿತು ತಮ್ಮ ಭವಿಷ್ಯದ ಗುರಿಯನ್ನು ಮುಟ್ಟಬೇಕಾಗಿದೆ ಎಂದು ಹೇಳಿದರು.
ಭಾರತ ಸೇವಾದಳದ ಕಾರ್ಯದರ್ಶಿ ಬಿ.ಎನ್.ಶ್ರೀನಿವಾಸಮೂರ್ತಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಪ್ರೌಢಶಾಲಾ ಹಂತವು ಅತ್ಯಂತ ಮಹತ್ವದ್ದಾಗಿದ್ದು, ಯಾವುದೇ ಬಾಹ್ಯ ಆಕರ್ಷಣೆಗಳಿಗೆ ಒಳಗಾಗದೆ ಶ್ರದ್ಧೆ ಮತ್ತು ಆಸಕ್ತಿಯಿಂದ ಕಲಿತು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ. ಇದರ ಜತೆಗೆ ಪ್ರತಿಯೊಬ್ಬರಲ್ಲೂ ದೇಶಪ್ರೇಮ ಮತ್ತು ರಾಷ್ಟ್ರಧ್ವಜದ ಮೇಲೆ ಭಕ್ತಿ ಬೆಳೆಸಿಕೊಂಡು ಈ ರಾಷ್ಟ್ರದ ಆಸಕ್ತಿಗಳಾಗಿ ಬೆಳೆದು ಇತರರಿಗೆ ಮಾದರಿಯಾಗಿ ಬದುಕಬೇಕಾಗಿದೆ ಎಂದು ಹೇಳಿದರು.
ಕಸಾಪ ನಿಕಟಪೂರ್ವ ಅಧ್ಯಕ್ಷರಾದ ವಿ.ರವೀಂದ್ರನಾಥ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಕಲಿಕೆಗೆ ಆಸರೆಯಾಗಿ ಸಹಾಯ ಮಾಡಲು ಸಾಕಷ್ಟು ಮಂದಿ ದಾನಿಗಳು ಮತ್ತು ಸಂಘಸಂಸ್ಥೆಗಳು ಸನ್ನದ್ಧರಾಗಿವೆ. ಅವರ ನೆರವಿನಿಂದ ವಿದ್ಯಾರ್ಥಿಗಳಿಗೆ ಉತ್ತಮವಾದ ಕಲಿಕಾ ವಾತಾವರಣವನ್ನು ನಿರ್ಮಿಸಿ ಕೊಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ನಾವು ಸದಾ ಬದ್ಧ ಎಂದು ಹೇಳಿದರು.
ಇದೇ ವೇಳೆ ೨೦೨೧-೨೨ ನೇ ಸಾಲಿನಲ್ಲಿ ಎಸ್ಸೆಸ್ಸೆಎಲ್ಸಿ ಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರನ್ನು ಗಣ್ಯರು ಗೌರವಿಸಿ ಅಭಿನಂಧಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ಕಾರ್ಯದರ್ಶಿ ಪ್ರಕಾಶ್, ಸಹಶಿಕ್ಷಕರಾದ ಜಿ.ಗೋಪಿ, ಜಿ.ಸಿ.ರಾಮಚಂದ್ರಯ್ಯ, ಸಕ್ರಗೌಡ, ಎಸ್.ಮಂಜುಳ, ಎಚ್.ವಾಣಿಶ್ರೀ, ರಚ್.ಆರ್.ಲಕ್ಷ್ಮಿದೇವಮ್ಮ, ಜಿ.ಎನ್.ಸುಮಾ, ಯು.ಅಂಬಿಕಾದೇವಿ, ಎನ್.ಜಯಮ್ಮ, ಸುಮಂಗಳಾ, ಶಬ್ರಿನ್ ತಾಜ್, ಕಲಾವತಮ್ಮ, ರೂಪ, ಪದ್ಮಜಾ, ಮಂಜುವಾಣಿ ಸೇರಿದಂತೆ ಇತರರು ಭಾಗವಹಿಸಿದ್ದರು.