ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಮೈಗೂಡಿಸಿಕೊಳ್ಳಬೇಕು

ಕೆ.ಆರ್.ಪೇಟೆ.ಮಾ.22: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಮೈಗೂಡಿಸಿಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಮುಖಾಂತರ ಸುಭದ್ರ ರಾಷ್ಟ್ರದ ನಿರ್ಮಾಣಕ್ಕೆ ಅಮೂಲ್ಯವಾದ ಕಾಣಿಕೆಯನ್ನು ನೀಡಬೇಕು ಎಂದು ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಕರೆ ನೀಡಿದರು.
ಅವರು ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ವಿಜ್ಞಾನವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಜ್ಞಾನದ ಸಂಶೋಧನೆಯ ಫಲವಾಗಿ ನಮಗೆ ದೊರೆತಿರುವ ವಸ್ತುಗಳನ್ನು ಸಮಾಜದ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಬಳಸಬೇಕು ಸೋಮಾರಿಗಳಾಗಿ ವ್ಯರ್ಥವಾಗಿ
ಸುಮ್ಮನೆ ಕುಳಿತು ಕಾಲಹರಣ ಮಾಡದೇ ನಿಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಿ ವೈಜ್ಞಾನಿಕ ಸಂಶೋಧನೆಯನ್ನು ಮಾಡಿ ಸಮಾಜಕ್ಕೆ ಅಮೂಲ್ಯವಾದ ಕಾಣಿಕೆಯನ್ನು ನೀಡಬೇಕು ಎಂದು ಮನವಿ ಮಾಡಿದರು.
ಕನ್ನಡದ ಕೋಟ್ಯಾಧಿಪತಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದ ಗ್ರಾಮೀಣ ಪ್ರತಿಭೆ ವರಲಕ್ಷ್ಮಿ ಮತ್ತು ಮೈತ್ರಿ ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ್ದ ಆದಿತ್ಯ ಭಾರಧ್ವಾಜ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾಧ ನಡೆಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರಲ್ಲದೇ ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಸ್ವಾಭಿಮಾನದಿಂದ ಹಾಗೂ ಆತ್ಮವಿಶ್ವಾಸದಿಂದ ಹೆಜ್ಜೆಹಾಕಿ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.