ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.09:- ವಿದ್ಯಾರ್ಥಿಗಳು ಮೆಚ್ಚುವ ಶಿಕ್ಷಕರಾಗುವ ಜೊತೆಗೆ ಸದಾ ಆಸಕ್ತಿಯಿಂದ ಭೋದನೆ ಮಾಡುವ ಮೂಲಕ ಸಮಾಜಕ್ಕೆ ಆಸ್ತಿಯಾಗುವಂತಹ ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಕರಾಗಬೇಕೆಂದು ಮಾಜಿ ಉಪ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.
ನಗರದ ವರ್ತಕರ ಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ರಾಜ್ಯ ಹಾಗು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಶಿಕ್ಷಕರುಗಳಿಗೆ ಅಭಿನಚಿದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಿಮ್ಮ ಪಾಠವನ್ನು ಮನಮೆಚ್ಚಿ ಕೇಳುವಂತಾಗಬೇಕು. ಎಲ್ಲಾ ವಿದ್ಯಾರ್ಥಿಗಳನ್ನು ಗಮನಿಸಿ ಅವರ ಕಲಿಕೆಯ ಬಗ್ಗೆ ಅರ್ಥ ಮಾಡಿಸುವ ಇಚ್ಚಾಸಕ್ತಿ ಇರಬೇಕು. ಸದಾ ಅಧ್ಯಯನಶೀಲರಾಗಿರಬೇಕು. ಶಿಕ್ಷಕ ವೃತ್ತಿ ಅತ್ಯಂತ ಮಹತ್ವವಾದ್ದು, ತಂದೆ ತಾಯಿ ಹಾಗೂ ಶಿಕ್ಷಕರಿಗೆ ಗೌರವ ಕೊಡುವಂತಹ ಮೌಲ್ಯಯುತ ಶಿಕ್ಷಣ ಪ್ರತಿಯೊಬ್ಬರಿಗೂ ದೊರೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಸಂಘಟನೆ ಹಾಗೂ ಇಲಾಖೆಯ ಸಮನ್ವಯತೆಯಿಂದ ಕೆಲಸ ಮಾಡಬೇಕಾಗಿದೆ. ಶಿಕ್ಷಕರ ಸಮಸ್ಯೆಗಳು ಬಹಳ ಇವೆ.
ಈ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು, ನೀವೆಲ್ಲರು ಒಗ್ಗಟ್ಟಿನಿಂದ ಹೋರಾಟ ಮಾಡೋಣ. ಸಂಘಟನೆ ಶಕ್ತಿಯುತವಾಗಿರಬೇಕು. ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲಾ ಪ್ರೌಢ ಶಿಕ್ಷಕರ ಸಂಘವು ವೀರಭದ್ರಸ್ವಾಮಿ ನೇತೃತ್ವದಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಎನ್‍ಪಿಎಸ್ ಬದಲಿಸಿ, ಓಪಿಎಸ್‍ಅನ್ನು ಜಾರಿ ಮಾಡುವ ಬಗ್ಗೆ ನನ್ನ ಹೋರಾಟ ಸದನ ಹೊರೆಗೆ ಹಾಗೂ ಒಳಗೆ ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಬಗ್ಗೆ ಗಮನ ಸೆಳೆದಿದ್ದೇವೆ. ಈ ವರ್ಷ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅನುದಾನ ಹೊಂದಾಣಿಕೆ ಕಾರಣದಿಂದ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷವು ಸಹ ಪ್ರಾಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಮುಂದಿನ ವರ್ಷದ ಹಳೇ ಪಿಂಚಣಿ ಯೋಜನೆಯನ್ನು ಜಾರಿ ಮಾಡಲಿದೆ. ರಜಾ ಅವಧಿಯನ್ನು ಕಡಿತ ಮಾಡುವ ಮೂಲಕ ಶಿಕ್ಷಕರಿಗೆ ಹೆಚ್ಚಿನ ಹೊರೆ ಮಾಡಲಾಗುತ್ತದೆ.
ರಜಾ ದಿನಗಳಲ್ಲಿಯೂ ಶಿಕ್ಷಕರಿಗೆ ತರಬೇತಿಗಳನ್ನು ನೀಡುವುದು ಸರಿಯಲ್ಲ. ಈ ಬಗ್ಗೆ ಶಿಕ್ಷಣ ಸಚಿವರು ಹಾಗೂ ಆಯುಕ್ತರೊಂದಿಗೆ ಚರ್ಚೆ ಮಾಡಿದ್ದೇನೆ. ಶಿಕಣ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವವರು ಬಂದರೆ ಇಂಥ ತಪ್ಪುಗಳು ಮರುಕಳಿಸುವುದಿಲ್ಲ. ಅಧಿಕಾರಿಗಳಿಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಅರಿವು ಕೊರತೆ ಇರುತ್ತದೆ. ಅವರು ತಮ್ಮದೇ ಅದ ಲೋಕದಲ್ಲಿರುತ್ತದೆ. ಸಚಿವರನ್ನು ತಪ್ಪು ದಾರಿಗೆ ಎಳೆಯುವವರೇ ಹೆಚ್ಚಾಗುತಿದ್ದಾರೆ ಎಂದು ಮರಿತಿಬ್ಬೇಗೌಡ ವಿಷಾಧ ವ್ಯಕ್ತಪಡಿಸಿದರು.
ಮತ್ತೊಂದು ಅವಕಾಶ ಕೊಡಿ : ಈಗಾಗಲೇ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನೋಟಿಪಿಕೇಷನ್ ಜಾರಿಯಾಗಿದೆ. ನಾಲ್ಕು ಬಾರಿ ನಿಮ್ಮೆಲ್ಲರ ಪ್ರತಿನಿಧಿಯಾಗಿ ಉತ್ತಮ ಸೇವೆ ಮಾಡಿದ್ದೇನೆ. ನಿಮ್ಮ ಮತದಿಂದ ಆಯ್ಕೆಯಾಗಿ ನಿಮ್ಮೆಲ್ಲರ ಪರವಾಗಿ ಕೆಲಸ ಮಾಡಿದ್ದೇನೆ. ಶಿಕ್ಷಕರಿಗೆ ಕಳಂಕ ಬಾರದಂತೆ ನಡೆದುಕೊಂಡಿದ್ದಾನೆ. ಈಗ ಮತ್ತೊಮ್ಮೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ ಕಳುಹಿಸಿಕೊಡಿ, ಪ್ರತಿಯೊಬ್ಬ ಶಿಕ್ಷಕರು ಸಹ ಮತದಾನ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಿ ಎಂದು ಶಿಕ್ಷಕರಲ್ಲಿ ಮರಿತಿಬ್ಬೇಗೌಡ ಮನವಿ ಮಾಡಿದರು.
ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಕರ ಸೇವೆಯನ್ನು ಗುರುತಿಸಿ ಅವರನ್ನು ಪ್ರೋತ್ಸಹಿಸುವ ಕೆಲಸವನ್ನು ಸಂಘ ಮಾಡುತ್ತಿದೆ. ಸಂಘದ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಲು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ. ಮರಿತಿಬ್ಬೇಗೌಡ ಅವರನ್ನು ಆಹ್ವಾನಿಸಿ. ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ವೇದಿಕೆಯಲ್ಲಿ ಮಹಾಂತೇಶ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದಮಲ್ಲಪ್ಪ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮಹದೇವಸ್ವಾಮಿ ಎಸ್. ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕ ಪೃಥ್ವಿರಾಜ್, ಸಂಘದ ಜಿಲ್ಲಾ ಕಾರ್ಯದರ್ಶಿ ಕಿರಣ್ ರಾಜ್, ಉಪಾಧ್ಯಕ್ಷರಾದ ಶಾಂತರಾಜು, ಆನಂದರಾಜು, ಖಜಾಂಚಿ ಮಹೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್. ಎಸ್.ಆರ್, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಯಳಂದೂರು ತಾಲ್ಲೂಕು ಅಧ್ಯಕ್ಷ ಮಹದೇವ್, ಕೊಳ್ಳೇಗಾಲ ತಾ ಅಧ್ಯಕ್ಷ ಅಕ್ಬರ್, ಹನೂರು ತಾಲ್ಲೂಕು ಅಧ್ಯಕ್ಷ ಅಶೋಕ್, ಜಿಲ್ಲಾ ಉಪಾಧ್ಯಕ್ಷ ಗೋವಿಂದರಾಜು, ನಾಗೇಶ್, ಶಿವಕುಮಾರ್, ಸಹಕಾರ್ಯದರ್ಶಿಗಳಾದ ಮಲ್ಲೇಶ್, ಗಜೇಂದ್ರ, ಸಂ.ಕಾರ್ಯದರ್ಶಿಗಳಾದ ಮಾದೇಶ್, ಕುಮಾರ್, ಖಾಜಿಬ, ವೆಂಕಟೇಶ್, ಕುಮಾರ್ ಮೊದಲಾದವರು ಇದ್ದರು.