ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಗಮನಹರಿಸಿ

ಕಲಬುರಗಿ:ಮಾ.15: ಸಾಪೇಕ್ಷ ಸಿದ್ಧಾಂತ ಮಂಡನೆಕಾರ, ಪರಮಾಣುಶಕ್ತಿಯ ರಹಸ್ಯವನ್ನು ಶ್ರುತಪಡಿಸಿ, ಮಾನವ ಕಲ್ಯಾಣ, ವಿಶ್ವಶಾಂತಿಯಲ್ಲಿ ಅಪಾರ ಆಸಕ್ತಿ ತಳೆದಿದ್ದ ಶಾಂತಿಧೂತ, ಬಹುಮುಖ ಸಂಶೋಧನಾ ಸಾಮಥ್ರ್ಯ ಹೊಂದಿದ್ದ ಮಹಾನ ಭೌತವಿಜ್ಞಾನಿ ಆಲ್ಬರ್ಟ್ ಐನಸ್ಟೈನ್ ಅವರಾಗಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೇವಲ ಇಂಜಿನಿಯಿರಿಂಗ್ ಮತ್ತು ವೈದ್ಯಕೀಯ ಕ್ಷೇತ್ರ ಮಾತ್ರಕ್ಕೆ ಸಿಮಿತವಾಗದೆ, ಮೂಲ ವಿಜ್ಞಾನದತ್ತ ಆಸಕ್ತಿವಹಿಸಿ ವಿಜ್ಞಾನಿಗಳಾಗಬೇಕಾಗಿದೆಯೆಂದು ಭೌತಶಾಸ್ತ್ರ ಉಪನ್ಯಾಸಕ ಶಂಕ್ರೆಪ್ಪ ಹೊಸದೊಡ್ಡಿ ಸಲಹೆ ನೀಡಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಖ್ಯಾತ ಭೌತವಿಜ್ಞಾನಿ ಆಲ್ಬರ್ಟ್ ಐನಸ್ಟೈನ್ ಅವರ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ಐನಸ್ಟೈನ್ ಅವರು ಮಾಡಿದ ಸೇವೆ ಮತ್ತು ದ್ಯುತಿ ವಿದ್ಯುತ್ ಪರಿಣಾಮದ ನಿಯಮವನ್ನು ಸಂಶೋಧಿಸಿದ್ದಕ್ಕಾಗಿ 1921ರಲ್ಲಿ ಅವರಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು. ಸಾಪೇಕ್ಷ ಸಿದ್ಧಾಂತವು ಬ್ರಹ್ಮಾಂಡದ ರಚನೆ ವಿವರಣೆ ಹೊಂದಿದೆ. ಭೌತಶಾಸ್ತ್ರದ ಮೂಲಭಾವನೆ ಮತ್ತು ತತ್ವಗಳನ್ನು ಅನೇಕ ರೀತಿಯಲ್ಲಿ ಮಾರ್ಪಡಿಸಿ ವಿಜ್ಞಾನಿಗಳ ದೃಷ್ಟಿಯನ್ನೇ ಬದಲಾಯಿಸಿದ ಯುಗಪುರುಷ ಐನಸ್ಟೈನ್ ಅವರಾಗಿದ್ದಾರೆಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹ್ಮದ್ ಅಲ್ಲಾವುದ್ದೀನ ಸಾಗರ, ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪೂರಕರ್, ಎಚ್.ಬಿ.ಪಾಟೀಲ, ಪ್ರಕಾಶ ಪಾಟೀಲ, ಸಿಬ್ಬಂದಿ ನೇಸರ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಮುತ್ತಣ್ಣ, ಬಾಬುರಾಯ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.