ವಿದ್ಯಾರ್ಥಿಗಳು ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆ ಸದುಪಯೋಗಪಡಿಸಿಕೊಳ್ಳಿ

ಕಲಬುರಗಿ.ನ.8: ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ, ಐಟಿಐ, ಡಿಪ್ಲೊಮಾ, ಬಿ.ಎ. ಬಿ.ಕಾಂ, ಬಿ.ಎಸ್ಸಿ, ಎಲ್.ಎಲ್.ಬಿ, ಪ್ಯಾರಾಮೆಡಿಕಲ್, ಭಿ.ಫಾರ್ಮ್, ನಸಿಂಗ್, ಬಿ.ಇ, ಬಿ.ಟೆಕ್, ಎಂ.ಬಿ.ಬಿಎಸ್ ಸೇರಿದಂತೆ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸುಗಳನ್ನು ಅಧ್ಯಯನ ಮಾಡಲು ರೈತರ ಮಕ್ಕಳಿಗಾಗಿ ಸರ್ಕಾರ ಜಾರಿಗೊಳಿಸಲಾದ ‘ಮುಖ್ಯಮಂತ್ರಿ ರೈತ ವಿದ್ಯಾ ನಿಧಿ’ ಶಿಷ್ಯವೇತನ ಯೋಜನೆಯನ್ನು ವಿದ್ಯಾರ್ಥಿಗಳು ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿವಲಿಂಗಪ್ಪ ಅವಂಟಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಸೋಮವಾರ ಜರುಗಿದ ಯೋಜನೆಯ ಮಾಹಿತಿಯುಳ್ಳ ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ರೈತಾಪಿ ವರ್ಗದ ಮಕ್ಕಳಿಗೆ ಇದೊಂದು ವರದಾನವಾದ ಯೋಜನೆಯಾಗಿದೆ. ಪಹಣಿ, ಆಧಾರ ಕಾರ್ಡ ಮತ್ತು ಬ್ಯಾಂಕ್ ಖಾತೆಯ ಪಾಸ್‍ಬುಕ್ ದಾಖಲೆಗಳೊಂದಿಗೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಶಿಷ್ಯವೇತನಕ್ಕಾಗಿ ನೋಂದಾಯಿಸಬೇಕು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡಿಸಬೇಕು. ರೂ.2500 ರಿಂದ 11000ರವರೆಗೆ ಕೋರ್ಸ್ ಹಾಗೂ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಆಧಾರದ ಮೇಲೆ ಶಿಷ್ಯವೇತನ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 1804253553 ಸಂಖ್ಯೆಗೆ ಉಚಿತ ಕರೆಮಾಡಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ರಾಜು ಎಸ್.ಪವಾರ, ಕಾಲೇಜಿನ ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪುರಕರ್, ರವಿಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಎಚ್.ಬಿ.ಪಾಟೀಲ, ಪ್ರಕಾಶ ಪಾಟೀಲ, ಪ್ರ.ದ.ಸ ನೇಸರ ಬೀಳಗಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.