ವಿದ್ಯಾರ್ಥಿಗಳು ಭವ್ಯ ಭಾರತದ ಆಸ್ತಿಗಳಾಗಿ

ಬ್ಯಾಡಗಿ,ಜ.5: ವಿದ್ಯಾರ್ಥಿಗಳು ತಮಗೆ ದೊರಕಿರುವ ಅವಕಾಶಗಳನ್ನು ಬಳಸಿಕೊಂಡು ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ಜೀವನವನ್ನು ನಡೆಸುವಂತಾಗಬೇಕೆಂದು ಡಾ.ಎಸ್.ಎನ್.ನಿಡಗುಂದಿ ಹೇಳಿದರು.
ಪಟ್ಟಣದ ಆದರ್ಶ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಪ್ರಸಕ್ತ ವರ್ಷದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಫ್ರೆಶರ್ ಡೇ(ವೆಲ್’ಕಮ್ ಡೇ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್, ಅಂತರ್ಜಾಲ, ಟಿವಿಗಳಿಂದ ದೂರವಿದ್ದು, ಒಳ್ಳೆಯ ಆಸಕ್ತಿ, ಆಲೋಚನೆ ಹಾಗೂ ಶ್ರದ್ಧಾಭಕ್ತಿಗಳನ್ನು ಮೈಗೂಡಿಸಿ ಗುಣಮಟ್ಟದ ಶಿಕ್ಷಣ ಪಡೆದು ಸತ್ಪ್ರಜೆಗಳಾಗಿ ಬಾಳಿ ಭವ್ಯ ಭಾರತದ ಆಸ್ತಿಗಳಾಗುವಂತೆ ಕರೆಕೊಟ್ಟರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜೀವ ಅಂಗಡಿ ಮಾತನಾಡಿ, ಕಾಲೇಜಿನಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಡಿಮೆ ಶುಲ್ಕ ಹಾಗೂ ರಿಯಾಯ್ತಿ ಸೌಲಭ್ಯವನ್ನು ಒದಗಿಸಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಉದ್ಯೋಗದ ಅವಕಾಶವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪುಟ್ಟರಾಜ, ಪುರಸಭಾ ಸದಸ್ಯರಾದ ನ್ಯಾಯವಾದಿ ಶಿವರಾಜ ಅಂಗಡಿ, ಪ್ರಾಚಾರ್ಯ ಪ್ರಶಾಂತ ಜಂಗಳೇರ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.