ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ಹಗರಿಬೊಮ್ಮನಹಳ್ಳಿ:ನ.21 ವಿದ್ಯಾರ್ಥಿಗಳು ಪಾಠದ ಜೊತೆಗೆ ಗ್ರಂಥಾಲಯದಲ್ಲಿ ಲಭ್ಯವಿರುವ ವಿಭಿನ್ನ ಅಭಿರುಚಿಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಹೆಚ್ಚಿನ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಡಿವಾಳರ ಕೊಟ್ರೇಶ್ ತಿಳಿಸಿದರು.
ಅವರುತಾಲೂಕಿನ ತಂಬ್ರಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು. ಗ್ರಂಥಾಲಯದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪತ್ರಿಕೆಗಳು, ಕಥೆ,ಕಾದಂಬರಿ,ಕವನ ಸಂಕಲನ ಹಾಗೂ ಕಲೆ, ಸಾಹಿತ್ಯಿಕ ಸಾಂಸ್ಕೃತಿಕ ಪ್ರಭಾವ ಬೀರುವ ಅನೇಕ ಪುಸ್ತಕಳಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿನಾಯಕ್. ಎಲ್‍ಡಿ ಅದ್ಯಕ್ಷತೆ ವಹಿಸಿ ಮಾತನಾಡಿ ಕೊರನಾ ಸಂದರ್ಭದಲ್ಲಿ ರಾಜ್ಯಾದ್ಯಂತ ಶಾಲೆ ಕಾಲೇಜುಗಳು ಮುಚ್ಚಿದ್ದು ವಿದ್ಯಾರ್ಥಿಗಳು ಗ್ರಂಥಾಲಯದೆಡೆಗೆ ಆಕರ್ಷಿತರಾಗಲು ಸರ್ಕಾರ ಓದುವ ಬೆಳಕು ಕಾರ್ಯಕ್ರಮ ಜಾರಿಗೆ ತಂದಿದ್ದು ವಿದ್ಯಾರ್ಥಿಗಳಿಗೆ ಉಚಿತ ಸದಸ್ಯತ್ವ ನೊಂದಣಿ ಮಾಡಲಾಗುತಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಸದಸ್ಯತ್ವ ಪಡೆಯುವಂತೆ ಮನವಿಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಣಕಾರ ಕೊಟ್ರೇಶ್ ಮಾತನಾಡಿ ಹೋಬಳಿ ವ್ಯಾಪ್ತಿಯಲ್ಲಿರುವ ತಂಬ್ರಹಳ್ಳಿ ಗ್ರಂಥಾಲಯ ಅತ್ಯುತ್ತಮ ಪುಸ್ತಕಗಳನ್ನು ಹೊಂದಿದ್ದು ಇದರ ಮೇಲ್ವಿಚಾರಕ ಪಾಂಡುರಂಗಪ್ಪ ಹೆಚ್ಚು ಕ್ರೀಯಾಶೀಲರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೊಂದು ಜಿಲ್ಲೆಯಲ್ಲಿಯೇ ಮಾದರಿ ಗ್ರಂಥಾಲವಾಗಿದೆ ಎಂದರೆ ತಪ್ಪಾಗಲಾರದು ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಹಾಗೂ ಪಿಯುಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಬಿ.ಸೃಷ್ಟಿ, ಮಹಾಂತೇಶ್, ಹಾಗೂ ಹೊಳಲಮ್ಮ, ಸಿಂದೋಗಿ ಅನಿತಾ ಮತ್ತು ಗ್ರಂಥಾಲಯದ ಉತ್ತಮ ಓದುಗ ಸಿ.ವಸಂತ, ಬನ್ನಿಗೋಳ ಗ್ರಂಥಾಲಯದ ಮೇಲ್ವಿಚಾರಕ ಕಬ್ಬೇರ ಮಂಜುನಾಥ, ದತ್ತಿ ದಾನಿಗಳಾದ ಬಿ.ದೇವಿಪ್ರಸಾದ್, ಕಿನ್ನಾಳ ಕೊಟ್ರೇಶ್ ಇವರಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಟಿಜಿ. ದೊಡ್ಡಬಸಪ್ಪ, ಮಂಜುನಾಥ. ಎ.ಕೊಟ್ರೇಶ್, ಬಳಕಂಡಿ ಹನುಮಂತಪ್ಪ, ಚಂದ್ರಶೇಖರ್, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು. ಕಿಪೋಗು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಗ್ರಂಥಾಲಯ ಮೇಲ್ವಿಚಾರಕ ಟಿ ಪಾಂಡುರಂಗಪ್ಪ ಪ್ರಾಸ್ತಾವಿಕವಾಗಿ ನುಡಿದರು. ಶಿಕ್ಷಕ ಪ್ರದೀಪ್ ನಿರ್ವಹಿಸಿದರು.