ವಿದ್ಯಾರ್ಥಿಗಳು ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಉನ್ನತ ಹುದ್ದೆಗಾಗಿ ಆಯ್ಕೆಯಾಗಿ: ಗಂಗಾಧರ್

ಸಂಜೆವಾಣಿ ವಾರ್ತೆ
ಚಾಮರಾಜನಗರ: ಜು.15:- ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ವ್ಯಾಸಂಗ ಮಾಡುವ ಮೂಲಕ ಉನ್ನತ ಹುದ್ದೆಗಳನ್ನು ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಚಾಮರಾಜನಗರ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ತಿಳಿಸಿದರು.
ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕøತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪದವಿ ಪಡೆದುಕೊಳ್ಳುವುದು ಮುಖ್ಯವಲ್ಲ. ಉತ್ತಮ ಜ್ಞಾನವನ್ನು ಸಂಪಾದನೆ ಮಾಡಿ, ಸಾಮಾನ್ಯ ಜ್ಞಾನ ಹಾಗು ಇತರೇ ವಿಚಾರಗಳ ಬಗ್ಗೆ ತಿಳಿದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭಾಗವಹಿಸಿ, ಹೆಚ್ಚಿನ ಅಂಕ ಪಡೆದು, ಉನ್ನತ ಹುದ್ದೆಗಳನ್ನು ಪಡೆದುಕೊಳ್ಲುವುದು ನಿಮ್ಮೇಲ್ಲರ ಗುರಿಯಾಗಿರಬೇಕು. ವಿದ್ಯಾರ್ಥಿ ಜೀವನ ಬಹಳ ಸುಖಕರವಾಗಿರುತ್ತದೆ. ಈ ಹಂತದಲ್ಲಿ ಗುರಿಯನ್ನಿಟ್ಟುಕೊಂಡು ಛಲದಿಂದ ಮುನ್ನುಗ್ಗಬೇಕು. ಈ ಹಿಂದೆ ಪುಸ್ತಕಗಳನ್ನು ಖರೀದಿ ಮಾಡುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದು ಕಷ್ಟವಾಗುತ್ತಿತ್ತು. ಈ ಎಲ್ಲವು ಸಹ ತಮ್ಮ ಬೆರಳ ತುದಿಯಲ್ಲಿರುತ್ತವೆ.
ನಮ್ಮ ವಿವಿಯಲ್ಲಿಯೇ ಉತ್ತಮ ಗ್ರಂಥಾಲಯವನ್ನು ಸ್ಥಾಪನೆ ಮಾಡಲಾಗಿದೆ. ಜತೆಗೆ ಈ ಗ್ರಂಥಾಲಯಗಳಿವೆ. ಇವೆಲ್ಲರನ್ನು ತಿಳಿದುಕೊಳ್ಳುವ ಮೂಲಕ ರ್ಯಾಂಕ್ ಗಳಿಸುವ ಪ್ರಯತ್ನವನ್ನು ತಾವೆಲ್ಲರು ಮಾಡಬೇಕು ಎಂದು ಗಂಗಾಧರ್ ಕಿವಿಮಾತು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಹಾಗು ಮಾಜಿ ನಗರಸಭಾ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ದೆಯಿಂದ ಓದುವ ಮೂಲಕ ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗಬೇಕು. ಸರ್ಕಾರ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲ ಪದವಿ ಪಡೆದುಕೊಳ್ಳಬೇಕು. ಕೇವಲ ಎಫ್‍ಡಿಎ ಆದರೆ ಪ್ರಯೋಜನವಿಲ್ಲ. ತಾವೆಲ್ಲರು ಉನ್ನತ ಅಧಿಕಾರಿಗಳಾಗಬೇಕು. ಆ ಧಿಕ್ಕಿನಲ್ಲಿ ನಿಮ್ಮೆಲ್ಲರ ಚಿಂತನೆ ಇರಲಿ. ನಮ್ಮ ಸಂಸ್ಥೆಯಲ್ಲಿ ಪದವಿ ಪಡೆದು ವಿದ್ಯಾರ್ಥಿಗಳು ರ್ಯಾಂಕ್ ಪಡೆದುಕೊಂಡರೆ ಅಂಥವರಿಗೆ ನಗರದಲ್ಲಿ ಒಂದು ಸೈಟು ಹಾಗೂ 25 ಸಾವಿರ ರೂ. ನಗದು ನೀಡುವುದಾಗಿ ಘೋಷಣೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸಂಸ್ಥೆಯ ಕಾರ್ಯದರ್ಶಿ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಮಾತನಾಡಿ, ಸಿದ್ದಾರ್ಥ ಪದವಿ ಕಾಲೇಜು ವಿದ್ಯಾರ್ಥಿಗಳ ಶ್ರಯೋಭಿವೃದ್ದಿಯನ್ನು ಬಯಸಿ, ಸಂಸ್ಥೆಯನ್ನು ಆರಂಭಿಸಲಾಗಿದೆ. ಪದವಿ ವ್ಯಾಸಂಗ ಸೇರುವ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಮಾತ್ರ ಸೀಮಿತಗೊಳ್ಳಬೇಕು. ಇತರೇ ಕೆಲಸ ಕಾರ್ಯಗಳನ್ನು ತಮ್ಮನ್ನು ತೊಡಗಿಸಿಕೊಂಡರೆ, ವ್ಯಾಸಂಗಕ್ಕೆ ತೊಡಕು ಉಂಟಾಗುತ್ತದೆ. ವಿಶ್ವವಿದ್ಯಾನಿಲಯ ಕುಲಪತಿಗಳು ನಮ್ಮ ಕಾಲೇಜಿಗೆ ಆಗಮಿಸಿರುವುದು ತುಂಬ ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಹಾಗು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ವೇದಿಕೆಯಲ್ಲಿ ಭಾರತೀಯ ಬೌದ್ದ ಮಹಾಸಭಾದ ಉಪಾಧ್ಯಕ್ಷೆ ನಾಗಶಿಲ್ಪ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್. ಮಹದೇವಸ್ವಾಮಿ, ಪಿಯು ಕಾಲೇಜಿನ ಪ್ರಾಂಶುಪಾಲ ಸಿ. ರಂಗಸ್ವಾಮಿ, ಹಿಫೋ ಕ್ಯಾಂಪಸ್ ಶಾಲೆಯ ಮುಖ್ಯಶಿಕ್ಷಕಿ ಶೃತಿ, ಅಧ್ಯಾಪಕರಾದ ರಮತ್ಯ, ಪೂರ್ಣಿ, ಪ್ರಸನ್ನ, ಮೊದಲಾದವರು ಇದ್ದರು.