ವಿದ್ಯಾರ್ಥಿಗಳು ಪಠ್ಯಪುಸ್ತಕಕ್ಕೆ ಸೀಮಿತ ಬೇಡ: ಡಾ. ರಾಘವೇಂದ್ರ ಚಿಂಚನಸೂರ

ಕಲಬುರಗಿ:ಆ.20:ಇಂದಿನ ಯುವಜನತೆ ಪಠ್ಯ ಪುಸ್ತಕಕ್ಕೆ ಸೀಮಿತವಾಗಿದ್ದು, ಸಮಾಜದಲ್ಲಿನ ವಿಚಾರಗಳನ್ನು ಅರಿಯದೇ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ ಎಂದು ಎಸ್‍ಆರ್‍ಜಿ ಫೌಂಡೇಶನನ ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ ಅಭಿಪ್ರಾಯಪಟ್ಟರು.

ಆಳಂದ ಪಟ್ಟಣದ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಮನಸ್ಸಿನ ಆಕರ್ಷಣೆಗಳು ತಾತ್ಕಾಲಿಕವಾಗಿದ್ದು, ಅವುಗಳ ಹಿಂದೆ ಹೋದವರು ಜೀವನದಲ್ಲಿ ನೊಂದಿರುವ ನಿದರ್ಶನಗಳು ಹೆಚ್ಚಾಗಿವೆ. ಕಾಲೇಜು ಸಂದರ್ಭದಲ್ಲಿ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.

ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಸ್ವಯಂ ಪ್ರೇರಣೆಯಿಂದ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಬೇಕು. ಶಿಕ್ಷಣದ ನಂತರದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸೂಚಿಸಿದರು.

ಸಂಸ್ಥೆಯ ಬಿ ಎಡ್ ಕಾಲೇಜಿನ ಪ್ರಾಚಾರ್ಯ ಅಶೋಕರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆ ಬಿಟ್ಟು ಅಧ್ಯಯನಶೀಲರಾಗಬೇಕು. ಮೊಬೈಲ್ ಬಳಕೆಯಿಂದ ಮನಸ್ಸು ಹಾಳಾಗುತ್ತದೆ ಮನಸ್ಸಿನ ಏಕಾಗ್ರತೆಗಾಗಿ ಯೋಗ, ಧ್ಯಾನ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿದರೆ ಮಾತ್ರ ಉತ್ತಮ ಅಂಕ ಗಳಿಸಬಹುದು. ದುಶ್ಚಟಗಳಿಂದ ದೂರವಿದ್ದು, ನಿತ್ಯ ಲಿಂಗಪೂಜೆ, ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮವಾಗಿ ಓದಿ ಪ್ರಜ್ಞಾವಂತರಾಗಿ ದೇಶಕ್ಕೆ ಮತ್ತು ಕಾಲೇಜಿಗೆ ಕೀರ್ತಿ ತರಬೇಕು. ಆಳಂದ ತಾಲೂಕು ಕಲಬುರಗಿ ಜಿಲ್ಲೆಯಲ್ಲಿಯೇ ಶೈಕ್ಷಣಿಕವಾಗಿ ಮುಂದುವರೆದ ತಾಲೂಕು ಆಗಿದೆ ಇಲ್ಲಿ ವಿದ್ಯಾಭ್ಯಾಸ ಮಾಡಿದವರು ಸರ್ಕಾರದ ವಿವಿಧ ಮಟ್ಟದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ವಿಕೆಜಿ ಪದವಿ ಕಾಲೇಜು ಪ್ರಾಚಾರ್ಯ ಕಲ್ಯಾಣಿ ಸಾವಳಗಿ, ಶ್ರೀಧರ ಪಾಟೀಲ, ಮಲ್ಲಿನಾಥ ತುಕ್ಕಾಣೆ, ಮಲ್ಲಿಕಾರ್ಜುನ ಬುಕ್ಕೆ, ರಾಜಕುಮಾರ ಚಿಚಕೋಟೆ, ಸಿದ್ದಾರಾಮ ಧೋತ್ರೆ, ಶಶಿಕಾಂತ ಭೂಸಣಗೆ, ಶರಣಬಸಪ್ಪ ಶಿರೂರೆ, ಸಂತೋಷ ಕುಲಕರ್ಣಿ, ಜ್ಯೋತಿ ವಿಶಾಖ್ ಇದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಥಮ ಹಾಗೂ ದ್ವೀತಿಯ ವರ್ಷದ ಪಿಯು ವಿದ್ಯಾರ್ಥಿಗಳು, ಬೋಧಕ ಮತ್ತ ಬೊಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಪನ್ಯಾಸಕ ಚೆನ್ನಬಸಪ್ಪ ಹೊತಗಲ್ ಸ್ವಾಗತಿಸಿದರೆ, ಜಗದೇವಿ ಬಿರಾದಾರ ವಂದಿಸಿದರು. ಮಲ್ಲಿಕಾರ್ಜುನ ಶೃಂಗೇರಿ, ಲಕ್ಷ್ಮೀ ಬಿರಾದಾರ ವಂದಿಸಿದರು. ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.