ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿ-ಅಪರ ಜಿಲ್ಲಾಧಿಕಾರಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಜು.28, ಪದವಿ ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಮಾತ್ರ ಸಾಲದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸುವುದು ಎಂಬುದನ್ನು ಮನವರಿಕೆ ಮಾಡಿಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಬೇಕೆಂದು ಬಳ್ಳಾರಿಯ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ತಿಳಿಸಿದರು.
ಅವರು ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಪ್ಲೇಸ್‍ಮೆಂಟ್ ಸೆಲ್, ಆಂತರಿಕ ಗುಣಮಟ್ಟ ಕೋಶ ಮತ್ತು ಧಾರವಾಡದ ಚಾಣಕ್ಯ ಕರಿಯರ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಯಶಸ್ವಿಯಾದ ಸಾಧಕರ ಹಿಂದೆ ಪುಸ್ತಕಗಳಿರುತ್ತವೆ. ವಿಫಲರಾದವರ ಹಿಂದೆ ಟಿ.ವಿ ಮತ್ತು ಮೊಬೈಲ್‍ಗಳಿರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆ, ನಿಯತಕಾಲಿಕೆಗಳನ್ನು ಓದುವ ಮೂಲಕ ಸಾಮಾನ್ಯಜ್ಞಾನವನ್ನು ಹೆಚ್ಚಿಸಿಕೊಂಡಾಗ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳು ನಿಮ್ಮ ಪಾಲಿಗೆ ಸರಳವಾದ ಪರೀಕ್ಷೆಗಳಾಗುತ್ತವೆ ಎಂದು ನುಡಿದರು.
ಪ್ರಸ್ತುತ ದಿನಗಳಲ್ಲಿ ಪದವಿ ಪ್ರಮಾಣಪತ್ರಗಳು ಕೇವಲ ಅರ್ಹತೆಗೆ ಮಾತ್ರ ಇರುತ್ತವೆ. ಪದವಿಯಲ್ಲಿ ಗಳಿಸಿದ ಅಂಕಗಳು ಇಲ್ಲಿ ಗಣನೆಗೆ ಬರುವುದಿಲ್ಲ. ಪದವಿ ಪರೀಕ್ಷೆ ಎನ್ನುವುದು ಕೇವಲ ಒಂದು ಮೆಟ್ಟಿಲು ಮಾತ್ರವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು. ಆ ಮೂಲಕ ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು. ನೀವು ಪರೀಕ್ಷೆಯಲ್ಲಿ ಪಾಸಾದ ನಂತರ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ನೀವು ತಲುಪಬೇಕೆಂದು ಕರೆ ನೀಡುತ್ತಾ ಮಹಾಭಾರತದ ಒಂದು ಉದಾಹರಣೆಯನ್ನು ವಿವರಿಸಿದರು.
ವೇದಿಕೆಯಲ್ಲಿ ಮತ್ತೊರ್ವ ಅತಿಥಿ ಹಾಗೂ ಹಳೇ ವಿದ್ಯಾಥಿಯಾದ ಬಳ್ಳಾರಿಯ ತಹಶೀಲ್ದಾರ್ ವಿಶ್ವನಾಥ್ ಅವರು ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಚಲಿತ ವಿದ್ಯಮಾನದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ನೀವು ಆಯ್ಕೆ ಮಾಡಿಕೊಂಡ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕು. ಯಾವುದು ಓದಬೇಕು. ಯಾವುದು ಓದಬಾರದು ಎಂಬುದರ ಬಗ್ಗೆ ನಿಮಗೆ ತಿಳಿದಿರಬೇಕು. ಮತ್ತು ನೀವು ಅಧ್ಯಯನ ಮಾಡುವಾಗ ಸಮಯ ಪಾಲನೆ ಮಾಡಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ.ಶ್ರೀದೇವಿ ಆರ್.ಎಂ. ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು ಕಾಲೇಜು ಗ್ರಂಥಾಲಯದಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಅವುಗಳ ಸದುಪಯೋಗಪಡಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ದಸ್ತಗಿರಿಸಾಹೇಬ್ ದಿನ್ನೆ, ಪ್ಲೇಸ್‍ಮೆಂಟ್ ಸೆಲ್‍ನ ಸಂಚಾಲಕ ಕಲ್ಯಾಣಬಸವ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ.ಶೋಭರಾಣಿ, ಚಾಣಕ್ಯ ಅಕಾಡೆಮಿಯ ನಿರ್ದೇಶಕರಾದ ಪ್ರದೀಪ್ ಗುಡ್ಡದ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.