ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಆದ್ಯತೆ ನೀಡಲು ಕರೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ. ಜೂ.18: ವಿದ್ಯಾರ್ಥಿಗಳು ಅಂಕ ಆಧಾರಿತ ಶಿಕ್ಷಣಕ್ಕಿಂತ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜಿನ ಹಾನಗಲ್ ಕುಮಾರೇಶ್ವರ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡತನ ಹಿನ್ನೆಲೆಯ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ಪೈಪೋಟಿ ನೀಡಲು ಉತ್ತಮ ಶಿಕ್ಷಣ ಪಡೆಯುವುದು ಅವಶ್ಯವಿದೆ. ನನ್ನ ಆಡಳಿತಾವಧಿಯಲ್ಲಿ ಉತ್ತಮ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ ಎಂದರು.
ರಸ್ತೆ, ಕಟ್ಟಡ ಕಾಮಗಾರಿಗಳು ಅಭಿವೃದ್ಧಿಯ ಮಾನದಂಡವಲ್ಲ. ವೈಯಕ್ತಿಕ ಬದುಕು ಸುಧಾರಿಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ. ಆ ಮೂಲಕ ಕುಟುಂಬ ಸುಧಾರಣೆಯಾಗುತ್ತದೆ. ಕುಟುಂಬಗಳು ಸುಧಾರಣೆಯಾದರೆ ಹಳ್ಳಿ, ತಾಲೂಕು, ಜಿಲ್ಲೆ, ರಾಜ್ಯ, ದೇಶವೇ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಡಾ. ಕೆ.ಸತೀಶ ‘ಉತ್ತರ ಕರ್ನಾಟಕ ಅಭಿವೃದ್ಧಿಯ ಸ್ಥಿತಿಗತಿಗಳು’ ಕುರಿತು ಉಪನ್ಯಾಸ ನೀಡಿ, ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಬೇಕಾದರೆ ಉತ್ತಮ ಯೋಜನೆಗಳು ರೂಪಿತವಾಗಬೇಕು. ಉತ್ತಮ ಯೋಜನೆ ರೂಪಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ವಿಫಲವಾಗಿರುವುದು ಉತ್ತರ ಕರ್ನಾಟಕ ಅಭಿವೃದ್ಧಿಯ ಹಿನ್ನಡೆಗೆ ಕಾರಣ ಎಂದು ಹೇಳಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸರ್ಕಾರ ನೀಡುವ ವಿಶೇಷ ಅನುದಾನ ಬಳಸಿಕೊಳ್ಳುವಲ್ಲಿಯೂ ಹಿಂದೆ ಬಿದ್ದಿರುವುದು ನಮ್ಮಲ್ಲಿಯ ಅಸಡ್ಡೆಗೆ ಸಾಕ್ಷಿಯಾಗಿದೆ. ಭವಿಷ್ಯದ ಕರಾಳತೆ ಅರಿತು ಜಾಗೃತಿಯಾಗಬೇಕಾಗಿದೆ. ಎಲ್ಲ ರಂಗದಲ್ಲೂ ಅಭಿವೃದ್ಧಿಯ ಚಿಂತನೆ ನಡೆಸಬೇಕಾಗಿದೆ ಎಂದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಸಾಕಷ್ಟು ಹಿಂದೆ ಬಿದ್ದಿದೆ. ಅದಕ್ಕೆ ಈ ಭಾಗದ ಶಿಶು ತಾಯಿ ಮರಣ ಪ್ರಮಾಣ, ಸಾಕ್ಷರತೆ, ಬಡತನ ಹೆಚ್ಚಿರುವುದು ಸಾಕ್ಷಿಯಾಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯತೆ ಇದೆ ಎಂದು ತಿಳಿಸಿದರು.
ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಹಿಂದೆ ಜಿಲ್ಲಾ ಖನಿಜ ನಿಧಿಯಿಂದ ‘ಸ್ಪೂರ್ತಿ’ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದು ಈ ಭಾಗದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಹೆಚ್ಚು ಅನುಕೂಲವಾಗಿತ್ತು. ಅವರು ವರ್ಗಾವಣೆ ಬಳಿಕ ಈ ಕಾರ್ಯಕ್ರಮ ಸ್ಥಗಿತವಾಗಿದ್ದು, ಶಾಸಕರು ಈ ಬಗ್ಗೆ ಜಿಲ್ಲಾಡಳಿತ ಗಮನಸೆಳೆದು ತರಬೇತಿಯನ್ನು ಮತ್ತೆ ಪ್ರಾರಂಭಿಸಬೇಕು ಎಂದು ಹೇಳಿದರು.
ಜಿಬಿಆರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಕಾಲೇಜು ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಸಿ.ಮೋಹನರೆಡ್ಡಿ, ಸದಸ್ಯರಾದ ಕೋಡಿಹಳ್ಳಿ ಮುದುಕಪ್ಪ, ಎಂ.ಪಿ.ಎಂ.ವೀರಭದ್ರ ದೇವರು, ಕೆ.ಎಂ. ಉದಾಸಿ, ವಿ.ಸಿ.ಪಾಟೀಲ್, ಡಾ.ಪ್ರಕಾಶ ಅಟವಾಳಗಿ, ಎಸ್.ಜಯಶೀಲ ಉಪಸ್ಥಿತರಿದ್ದರು.
ತಾಲ್ಲೂಕು ಕಸಾಪ ಅಧ್ಯಕ್ಷ ವೀರೇಂದ್ರ ಪಾಟೀಲ್ ಸ್ವಾಗತಿಸಿದರು. ಶೈಲಾಜ ಪವಾಡಶೆಟ್ಟರ್ ನಿರೂಪಿಸಿದರು.

One attachment • Scanned by Gmail