ವಿದ್ಯಾರ್ಥಿಗಳು ಗುರಿ ಹೊಂದಿದಾಗ ಮಾತ್ರ ಸಾಧನೆ ಸಾಧ್ಯ : ಮಹಾಲಿಂಗ ದೇವರು

ಔರಾದ್ : ಮಾ.22:ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಅಭ್ಯಾಸ ಮಾಡಬೇಕು ಇದರಿಂದ ಮನೋಬಲ ಹೆಚ್ಚುತ್ತದೆ, ಆದ್ದರಿಂದ ಗುರಿ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀಗಳಾದ ಮಹಾಲಿಂಗ ದೇವರು ಹೇಳಿದರು.

ತಾಲೂಕಿನ ಸಂತಪೂರ ಅನುಭವ ಮಂಟಪ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ಗುರಿಯಿಂದ ಮನೋಬಲ ಹೆಚ್ಚಿಸುತ್ತದೆ ಗುರುಗಳ ಮಾರ್ಗದರ್ಶನ ಪಡೆದು ಬದಲಾವಣೆಯನ್ನು ತರುವ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಶಾಲಾ ಅವಧಿಯಲ್ಲಿನ ಶಿಕ್ಷಣ ಜತೆಗೆ ಮಕ್ಕಳು ಸ್ವಯಂ ಪ್ರೇರಿತರಾಗಿ ಮನೆಯಲ್ಲಿ ಸತತ ಅಭ್ಯಾಸ ಮಾಡುವುದರಿಂದ ಮಹತ್ತರ ಸಾಧನೆ ಮಾಡಬಹುದು ಎಂದು ಹೇಳಿದರು.

ಇದೇ ಮಾರ್ಚ್ 25ರಿಂದ ಪರೀಕ್ಷೆ ಆರಂಭವಾಗಲಿವೆ. ಆದ್ದರಿಂದ ವಿದ್ಯಾರ್ಥಿಗಳು ಭಯದಿಂದ ಹೊರಬಂದು ತಾವು ಪಡೆದಿರುವ ಕಲಿಕೆಯನ್ನು ಪುನರ್ ಮನನ ಮಾಡಿಕೊಂಡು ಹಬ್ಬದಂತೆ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆಯುವ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.

ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಅಜಯಕುಮಾರ ದುಬೆ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿ, ವಿದ್ಯಾರ್ಥಿಗಳು ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯಬಹುದು. ಆ ಮೂರು ಪರೀಕ್ಷೆ ಬರೆದವರು ಹೆಚ್ಚು ಅಂಕಗಳು ಯಾವ ಪರೀಕ್ಷೆಯಲ್ಲಿ ಬಂದಿರುತ್ತದೋ ಆ ಫಲಿತಾಂಶವನ್ನು ಉಳಿಸಿಕೊಳ್ಳುವ ಅವಕಾಶ ದೊರೆಯಲಿದೆ. ಇದು ಪ್ರಸಕ್ತ ಸಾಲಿನಿಂದ ಜಾರಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಭಯ ಬಿಟ್ಟು ಪರೀಕ್ಷೆ ಬರೆಯಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಶಿವಕುಮಾರ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮೂಲಕ ಶಾಲೆಗೆ ಕೀರ್ತಿ ತರುವದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಪ್ರಾಥಮಿಕ ಶಾಲೆಯ ಮುಖ್ಯಗುರು ಗಜಾನಂದ ಮುಂಗೆ, ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ವಿಜಯಕುಮಾರ ಪಾಈಲ್, ಗುರುಪ್ರೀತ ಕೌರ್, ಸಂಗಮೇಶ ಬ್ಯಾಳೆ, ಸಾಯಿಕುಮಾರ ಕರಂಜೆ, ಮಾರುತಿ ಗಾದಗೆ, ತಾನಾಜಿ ಗಾಯಕವಾಡ, ರವಿಕಾಂತ ಸ್ವಾಮಿ, ಚಂದ್ರಕಾಂತ ಶೇರಿಕಾರ, ರಾಜಕುಮಾರ ಘಾಟೆ, ಅವಿನಾಶ ಗಾಯಕವಾಡ, ಶಿಲ್ಪಾ, ಸರಿತಾ ಸೇರಿದಂತೆ ಅನೇಕರಿದ್ದರು.