ವಿದ್ಯಾರ್ಥಿಗಳು ಕ್ಷಣಿಕ ಸುಖಕ್ಕೆ ಮಾರುಹೋಗಬೇಡಿ 

ದಾವಣಗೆರೆ.ಜೂ.೨೯; 2022-23ನೇ ಸಾಲಿನ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಂಪ್ರದಾಯಿಕ ದಿನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ. ಕೆ. ಶಿವಶಂಕರ್  ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತ, ವಿದ್ಯಾರ್ಥಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಪರಿಶ್ರಮ ಮುಖ್ಯ, ಜ್ಞಾನಕ್ಕಿಂತ ಮಿಗಿಲಾದದ್ದು ಪ್ರಪಂಚದಲ್ಲಿ ಬೇರೇನು ಇಲ್ಲ. ಕ್ಷಣಿಕ ಸುಖಕ್ಕಾಗಿ ಬದುಕನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಅಭಿಪ್ರಾಯಪಟ್ಟರು ಮತ್ತೊಬ್ಬ ಮುಖ್ಯ ಅತಿಥಿಗಳಾದ ಪ್ರೊ. ಸಿ. ಎಚ್. ಮುರಿಗೇಂದ್ರಪ್ಪ  ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ನಡೆ-ನುಡಿ ಸನ್ಮಾರ್ಗದಲ್ಲಿದ್ದರೆ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ಹೋರಾಟದ ಮನೋಭಾವನೆ ಮತ್ತು ಧೈರ್ಯ ಅತ್ಯಗತ್ಯ ಎಂದು ಹೇಳುತ್ತ ಉನ್ನತ ವ್ಯಾಸಂಗಕ್ಕೆ ಹೆಚ್ಚು ವಿದ್ಯಾರ್ಥಿಗಳು ಗಮನಹರಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಶ್ರೀ ಮಾಗನೂರು ಸಂಗಮೇಶ್ವರ ಗೌಡರು ರ‍್ಯಾಂಕ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿರಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಪಿಹೆಚ್.ಡಿ ಪಡೆದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನೀಲಾಂಬಿಕ. ಜಿ. ಸಿ ಅವರು ವಹಿಸಿದ್ದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ವಿಜಯಕುಮಾರ್. ಎ.ಬಿ. ಸಾಂಸ್ಕೃತಿಕ ಸಂಯೋಜಕರಾದ ಡಾ. ಎಂ. ಮಂಜಪ್ಪ ಉಪಸ್ಥಿತರಿದ್ದರು. ಕುಮಾರಿ ಅಂಕಿತ. ಎಂ ಪ್ರಾರ್ಥಿಸಿದರು. ಪ್ರೊ. ಕೆ. ವೈ. ಈಶ್ವರ ಸ್ವಾಗತಿಸಿದರು. ಉಪನ್ಯಾಸಕಿ ಶೈಲಾ ಎನ್. ಶೆಟ್ಟಿ ನಿರೂಪಿಸಿದರು. ಪ್ರೊ. ರಂಗಸ್ವಾಮಿ ಟಿ. ಆರ್. ವಂದಿಸಿದರು. ಬೋಧಕ ಬೋಧಕೇತರ ವರ್ಗದವರು ಹಾಜರಿದ್ದರು.