ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು: ಡಾ. ರಂಜನಾ ಪಾಟೀಲ

ಬೀದರ:ಮೇ:16: ವಿದ್ಯಾರ್ಥಿಗಳು ಮೊಬೈಲ್ ಜೊತೆ ಹೆಚ್ಚು ಹರಟೆ ಹೊಡೆಯದೆ, ತಮಗೆ ಬೇಕಾದಷ್ಟು ಉಪಯೋಗಿಸಿದ ನಂತರ ಹೆಚ್ಚು ಅಭ್ಯಾಸದ ಕಡೆಗೆ ಗಮನ ಹರಿಸಬೇಕೆಂದು ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಂಜನಾ ಪಾಟೀಲ ತಿಳಿಸಿದರು.
ನಗರದ ಅಕ್ಕಮಹಾದೇವಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಮಯಪಾಲನೆ, ಶಿಸ್ತು ಮತ್ತು ಸಂಯಮ ಈ ಮೂರು ವಿದ್ಯಾರ್ಥಿಗಳಲ್ಲಿರಬೇಕು. ಕಾಲೇಜು, ಶಿಕ್ಷಕರು ಮತ್ತು ಪಠ್ಯಪುಸ್ತಕಗಳನ್ನು ಪ್ರೀತಿಯಿಂದ ಕಂಡಾಗ ಮಾತ್ರ ಅಧ್ಯಯನ ಪರಿಪೂರ್ಣವಾಗುತ್ತದೆ. ಅನಾವಶ್ಯಕ ವಿಷಯಗಳನ್ನು ತಲೆಗೆ ಹಾಕಿಕೊಂಡು ಜೀವನಕ್ಕೆ ವಿಮುಖರಾಗಿ ಬದುಕಬಾರದು. ಏನಾದರೂ ಹೊಸದನ್ನು ಸಾಧಿಸಿ ತೋರಿಸುವ ಛಲ ಮತ್ತು ಗುರಿ ಇಟ್ಟುಕೊಂಡಾಗ ಮಾತ್ರ ವಿದ್ಯಾರ್ಥಿಗಳು ಸಾಧನೆಯ ಉತ್ತುಂಗ ಶಿಖರಕ್ಕೇರುತ್ತಾರೆ. ಕಾಲೇಜಿಗೂ ಮತ್ತು ಪಾಲಕರಿಗೂ ಕೀರ್ತಿ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಡಾ. ರಂಜನಾ ಪಾಟೀಲ ಪ್ರತಿಪಾದಿಸಿದರು.
ಇದೇ ವೇಳೆ ವಿಜ್ಞಾನ ವಿಭಾಗದ ರಾಧಿಕಾ ಸಂಜೀವಕುಮಾರ (89.66%), ವಿಜಯಲಕ್ಷ್ಮೀ ಗೋರಕ (89%) ಮತ್ತು ಕಲಾ ವಿಭಾಗದ ವಿಜಯಲಕ್ಷ್ಮೀ ಎ. (85.66%) ಇವರು ತಲಾ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿ ಪಾಸಾಗಿದ್ದಕ್ಕೆ ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ಅದೇ ರೀತಿ ಸಂಗೀತಾ ಎಂ (ವಾಣಿಜ್ಯ ವಿಭಾಗ 82%), ನಿಕಿತಾ ಝರೆಪ್ಪಾ (ವಿಜ್ಞಾನ 83.83%), ಅಂಬಿಕಾ ಎಸ್ (ವಾಣಿಜ್ಯ 81.5%), ಅಕ್ಷಯಾ ಎಸ್ (ಕಲಾ 78%), ವೈಷ್ಣವಿ ಎಸ್ (ವಾಣಿಜ್ಯ 75.66%), ಸಂಚಿತಾ ಎಸ್ (ವಾಣಿಜ್ಯ 74.66%) ಪ್ರತಿಶತ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಕ್ಕಾಗಿ ಸನ್ಮಾನಿಸಲಾಯಿತು.
ಉಪನ್ಯಾಸಕಿ ಪ್ರಶೀಲಾ ಸ್ವಾಗತಿಸಿದರು. ಶ್ರೀಮತಿ ಅಂಬಿಕಾ ನಿರೂಪಿಸಿದರು. ಡಾ. ಧನಲಕ್ಷ್ಮೀ ಪಾಟೀಲ ವಂದಿಸಿದರು. ಇದೇ ವೇಳೆ ಶಿವರಂಜನಾ, ಕವಿತಾ ಪಟವಾದಿ, ಅಂಬಿಕಾ ಸಜ್ಜನಶೆಟ್ಟಿ, ಮೀನಾಕ್ಷಿ ಚಿಕ್ಕಪೇಟೆ, ಗೀತಾ ಸಂತೋಷ, ಲಕ್ಷ್ಮಣ ಬೇಂದ್ರೆ ಸೇರಿದಂತೆ ಪಿಯುಸಿ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.