ವಿದ್ಯಾರ್ಥಿಗಳು ಒಳ್ಳೆಯ ಗುರಿಗಳನ್ನು ಇಟ್ಟುಕೊಳ್ಳಬೇಕು :ಆಯುಕ್ತ ವಿಜಯಕುಮಾರ ಮೆಕ್ಕಳಕಿ

ವಿಜಯಪುರ, ಜು.26-ವಿದ್ಯಾರ್ಥಿಗಳು ಒಳ್ಳೆಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಶೈಕ್ಷಣಿಕವಾಗಿ ಹಾಲುಮತ ಸಮಾಜ ಬಹಳಷ್ಟು ಹಿಂದುಳಿದಿದೆ. ಸಮಾಜದ ಅವಶ್ಯಕತೆಗಳನ್ನು ಪೂರೈಸಬೇಕಾದರೆ ಶಿಕ್ಷಣವನ್ನೇ ಅಸ್ತ್ರವಾಗಿ ಬಳಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಹೇಳಿದರು.
ನಗರದ ಸಿದ್ದೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಹಾಲುಮತ ನೌಕರರ ಸಮಾವೇಶ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಲುಮತ ಸಮಾಜದಲ್ಲಿ ಶ್ರೀಮಂತರಿಗಿಂತ ಬಡವರೇ ಅಧಿಕವಾಗಿದ್ದಾರೆ. ಅದನ್ನು ನೆನಪಿನಲ್ಲಿ ಇಟ್ಟುಕೊಂಡೆ ಇಂದು ಹಾಲುಮತ ನೌಕರರ ಸಂಘ ಪ್ರತಿಭಾ ಪುರಸ್ಕಾರ ನೀಡುತ್ತಿದೆ ನಿಜಕ್ಕೂ ಇದು ಹೆಮ್ಮೆಯ ಸಂಗತಿ. ನಾವು ಮಾಡುವ ಪ್ರತಿ ಕೆಲಸದಲ್ಲೂ ಶ್ರದ್ಧೆ ಇಡಬೇಕು. ನಮ್ಮ ಹುದ್ದೆಯ ಬಗ್ಗೆ ಅಭಿಮಾನ ಇರಬೇಕು ಅಂದಾಗ ಮಾತ್ರ ನಾವು ಸಮಾಜಕ್ಕೆ ಒಳ್ಳೆದನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಕಷ್ಟಗಳನ್ನು ಎದುರಿಸಿದಾಗಲೇ ಉನ್ನತವಾದದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲೇ ಸ್ಪಷ್ಟ ಗುರಿ ಇಟ್ಟುಕೊಳ್ಳಿ, ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಸಾಧಿಸುವ ಮನಸ್ಸು, ಅಚಲ ನಿರ್ಧಾರ ನಮ್ಮದಾಗಿದ್ದಾಗ ಗೆಲುವು ತಾನಾಗಿಯೇ ಬರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಗಳು ಸಾಮಾನ್ಯ ನಾವು ಅವುಗಳಿಗೆ ಹೆದರದೇ ಧೈರ್ಯದಿಂದ ಮುನ್ನುಗ್ಗಿದಾಗ ಯಶಸ್ಸು ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಯುವ ಮುಖಂಡ ಸತ್ಯಜೀತ ಶಿವಾನಂದ ಪಾಟೀಲ ಮಾತನಾಡಿ, ಹಾಲುಮತ ಸಮಾಜದ ಬಗ್ಗೆ ನಮ್ಮ ತಂದೆಯವರಿಗೆ ದೊಡ್ಡ ಗೌರವವಿದೆ. ನಮ್ಮ ತಂದೆಯವರು ರಾಜಕೀಯವಾಗಿ ಸದೃಡರಾಗಲು ಹಾಲುಮತ ಸಮಾಜದ ಕೊಡುಗೆ ಬಹಳಷ್ಟು ಇದೆ. ನಾವು ಆ ಋಣವನ್ನು ಎಂದಿಗೂ ಮರೆಯುವುದಿಲ್ಲ. ಶೈಕ್ಷಣಿಕ, ಸಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಹಾಲುಮತ ಸಮಾಜದ ಹಿತ ಕಾಪಾಡಲು ನಾವು ಬದ್ಧ. ಮಕ್ಕಳ ಶಿಕ್ಷಣಕ್ಕೆ ಯಾವುದೇ ಸಮಸ್ಯೆಯಾದಲ್ಲಿ ನಮ್ಮ ಗಮನಕ್ಕೆ ತಂದರೆ ಖಂಡಿತ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಧಿಸುವ ಛಲ ಇರಬೇಕು. ನಾನು ಸಹಿತ ಅತ್ಯಂತ ಕಷ್ಟದ ಪರಸ್ಥಿತಿಯಲ್ಲಿ ವಿದ್ಯಾಬ್ಯಾಸ ಮಾಡಿ ಈ ಹುದ್ದೆಗೆ ಬಂದಿದ್ದೇನೆ. ಐಎಎಸ್ ಹಾಗೂ ಐಪಿಎಸ್ ಪರೀಕ್ಷೆ ಪಾಸು ಮಾಡುವುದು ಅತ್ಯಂತ ಕಷ್ಟದ ಕೆಲಸ ವಿದ್ಯಾರ್ಥಿಗಳು ಸಾಧಿಸು ಗುರಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಅಧ್ಯಯನ ಮಾಡಿದರೆ ಮಾತ್ರ ದೊಡ್ಡ ಹುದ್ದೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿ ಯಾರೇ ಬಡ ವಿದ್ಯಾರ್ಥಿಗಳಿದ್ದರೂ ಓದುವ ಛಲ ನಿಮ್ಮಲ್ಲಿ ಇದ್ದರೆ ನಮ್ಮ ಸಹಕಾರ ಯಾವತ್ತು ನಿಮಗೆ ಸಿಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿಲಗಿರೇಶ್ವರ ಗದ್ದಗಿ ಪೂಜಾರಿ, ಜಿ.ಪಂ.ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಜಿ.ಪಂ. ಮಾಜಿ ಸದಸ್ಯರಾದ ಗುರುನಗೌಡ ಪಾಟೀಲ, ಸಾಬು ಮಾಶ್ಯಾಳ, ಎಂ.ಎನ್.ಮದರಿ, ಗೌರಮ್ಮ ಮುತ್ತತ್ತಿ, ನಿವೃತ್ತ ಪೊಲೀಸ್ ಅಧಿಕಾರಿ ಹುಲ್ಲೂರ, ರಾಜು ಬಿರಾದಾರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಯಲ್ಲಮ್ಮ ಪಡೇಸೂರ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಅಧಿಕಾರಿ ಈರಣ್ಣ ಆಶಾಪೂರ ಇದ್ದರು.