ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿ ದೇಶಕ್ಕೆ ಕೊಡುಗೆ ನೀಡಿ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.05:- ನಾವುಗಳು ಭಾಷೆ, ದೇಶ ಬೆಳೆಸುವುದರಲ್ಲಿ ಹಿಂದಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ದೇಶಕ್ಕೆ ಕೊಡುಗೆ ನೀಡಿ ಎಂದು ರಾಮಕೃಷ್ಣ ವಿದ್ಯಾಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ಜಿ.ಚಂದ್ರಶೇಖರ್ ಕರೆ ನೀಡಿದರು.
ನಗರದ ಶ್ರೀ ಪ್ರಣಮ್ಯ ಎಜುಕೇಶನಲ್ ಟ್ರಸ್ಟ್, ಜ್ಯೋತಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಕಾಲೇಜಿನ ವಾರ್ಷಿಕೊತ್ಸವ ತರಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಹಿಂದೆ ಭಾರತವನ್ನು ಮುಂದುವರಿಯುತ್ತಿರುವ ರಾಷ್ಟ್ರ ಎನ್ನುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಜಪಾನ್‍ನಂತಹ ಪುಟ್ಟ ರಾಷ್ಟ್ರ ಅಭಿವೃದ್ಧಿಯಲ್ಲಿ ಮುಂದಿದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಜನರ ಶ್ರಮ. ಅದೇ ಮಾದರಿಯಲ್ಲಿ ನಾವೂ ಶ್ರಮಪಟ್ಟರೆ ಭಾರತ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದರು.
ವಿದ್ಯಾರ್ಥಿಗಳು ಹೆಚ್ಚೆಚ್ಚು ಅಧ್ಯಯನ ಮಾಡಬೇಕು. ಶಾಲಾ ದಿನಗಳಿಂದಲೇ ಭವಿಷ್ಯದೆಡೆಗೆ ನಿಶ್ಚಿತ ಗುರಿಯೊಂದಿಗೆ ಮುನ್ನಡೆಯಬೇಕು. ಬಿಹಾರ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದರೂ, ಐಎಎಸ್, ಐಪಿಎಸ್ ಅಧಿಕಾರಿಗಳು ಅಲ್ಲಿನವರೇ ಹೆಚ್ಚು. ಹೀಗಾಗಿ ವಿದ್ಯಾರ್ಥಿಗಳು ಏನಾದರು ಸಾಧಿಸುವ ಛಲದೊಂದಿಗೆ ಮುನ್ನಡೆಯಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಜ್ಞಾನ ಮಾತ್ರವಲ್ಲದೇ ಜೀವನ ಕೌಶಲವನ್ನೂ ಕಲಿಸಬೇಕು ಎಂದು ಕಿವಿ ಮಾತು ಹೇಳಿದರು.
ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ರಾಜ್ಯಧರ್ಮ ಪತ್ರಿಕೆಯ ಪ್ರಧಾನ ಸಂಪಾದಕ ಮಹಿ ಮಹೇಶ್, ಪ್ರತಿಯೊಬ್ಬರೂ ಒಂದಲ್ಲಾ ಒಂದು ತಪ್ಪು ಮಾಡಿರುತ್ತಾರೆ. ಆದರೆ, ಮತ್ತೆ ಅದೇ ತಪ್ಪನ್ನು ಮಾಡಬಾರದು. ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ 5ಡಿ ಫಾರ್ಮುಲಾ ಇಟ್ಟುಕೊಳ್ಳಬೇಕು. ಡಿಸೈರ್, ಡಿಸಿಷನ್ ಮೇಕಿಂಗ್, ಡ್ರೀಮಿಂಗ್, ಡೆಡಿಕೇಷನ್ ಇರಬೇಕು. ನಾನು ಎಲ್ಲವನ್ನೂ ಮಾಡಿದೆ. ಆದರೆ, ಡೆಡಿಕೇಷನ್ ಇಲ್ಲದಿದ್ದರಿಂದ ಅಂದುಕೊಂಡಿದ್ದನ್ನು ಸಾಧಿಸಲು ಆಗಲಿಲ್ಲ. ಹೀಗಾಗಿ ನೀವುಗಳು ಉತ್ತಮವಾಗಿ ಅಭ್ಯಾಸ ಮಾಡಿ ಸಾಧನೆಯ ಶಿಖರವೇರಿ ಎಂದು ಸಲಹೆ ನೀಡಿದರು.
ಪೆÇೀಷಕರು ನಿಮ್ಮ ಮೇಲೆ ಬೆಟ್ಟದಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಉತ್ತಮವಾಗಿ ಓದಿ ಅವರ ಕನಸನ್ನು ಸಾಕಾರಗೊಳಿಸಿ. ಉತ್ತಮ ಪ್ರಜೆಯಾಗಿ ದೇಶಕ್ಕೆ ಕೊಡುಗೆ ನೀಡಿ. ಹಿರಿಯರನ್ನು ಗೌರವಿಸಿ, ವಿಕಲಚೇತನರಿಗೆ ನೆರವಾಗಿ. ಸಾಧಿಸುವ ಛಲವನ್ನು ಎಂದಿಗೂ ಬಿಡಬೇಡಿ ಎಂದರು.
ಜ್ಯೋತಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಚನ್ನಬಸಪ್ಪ ಮಾತನಾಡಿ, ಮಕ್ಕಳು ಕಷ್ಟಪಟ್ಟು ಓದಬಾರದು. ಇಷ್ಟ ಪಟ್ಟು ಓದಬೇಕು ಆಗಲೇ ಓದು ತಲೆಗೆ ಹತ್ತುವುದು. ಈಗ ನಿಮಗೆ ಸುವರ್ಣ ಯುಗ ಓದಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮುದ್ದುವೀರಪ್ಪ, ಸವಿತಾ, ಮಧುಸೂದನ್, ಪ್ರಾಂಶುಪಾಲ ಭರತ್ ರಾಜ್, ಅರವಿಂದ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೆÇೀಷಕರು ಉಪಸ್ಥಿತರಿದ್ದರು.